

ಬೆಂಗಳೂರು: ಸಾಧಕರ ಸಾಧನೆಯ ಹಾದಿಯಲ್ಲಿ ಅವರು ಬೆಳೆದ ಪರಿಸರದ ಪಾತ್ರವೂ ಮಹತ್ವದ್ದಾಗಿರುತ್ತದೆ ಎಂದು ಸಂಗೀತ ವಿದುಷಿ ನಾಗಮಣಿ ಶ್ರೀನಾಥ್ ಹೇಳಿದ್ದಾರೆ.
ಬಬ್ಬೂರು ಕಮ್ಮೆ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜೋಡಿಗುಬ್ಬಿ ವಿಪ್ರವೃಂದದ 12ನೇ ವಾರ್ಷಿಕ ಸಮಾವೇಶದಲ್ಲಿ ‘ನನ್ನೂರು ಹೊನ್ನೂರು’ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ತಾವು ಚಿಕ್ಕವಯಸ್ಸಿನಲ್ಲಿ ಬೆಳೆದ ಜೋಡಿಗುಬ್ಬಿ ಗ್ರಾಮದ ಪರಿಸರ, ಕುಟುಂಬದವರು ಮತ್ತು ಗ್ರಾಮದ ಹಿರಿಯರು ನೀಡಿದ ಪ್ರೋತ್ಸಾಹ ಉತ್ತೇಜನ ನನ್ನ ಸಂಗೀತ ಸಾಧನೆಯಲ್ಲಿ ಬಹಳಷ್ಟು ಪ್ರಭಾವ ಬೀರಿದ್ದು ಇಂದು ನನ್ನನ್ನು ಸಾಧಕಿಯರ ಸಾಲಿನಲ್ಲಿ ನಿಲ್ಲಿಸಿದೆ ಎಂದರು.
ಸಮಾವೇಶದಲ್ಲಿ ಬಬ್ಬೂರು ಕಮ್ಮೆ ಸೇವಾ ಸಮಿತಿ ಅದ್ಯಕ್ಷ ಹಾಗೂ ಆರೋಗ್ಯ ಸಚಿವರ ವಿಶೇಷ ಕರ್ತಾವ್ಯಾಧಿಕಾರಿ ಡಾ. ಎ.ವಿ. ಪ್ರಸನ್ನ, ಅಮೆರಿಕಾ ವಿದೇಶಾಂಗ ಸಚಿವಾಲಯದ ನಿವೃತ್ತ ಅಧಿಕಾರಿ ಜಿ.ಎಸ್. ಗುಂಡೂರಾವ್, ಜೋಡಿಗುಬ್ಬಿ ವಿಪ್ರವೃಂದದ ಅಧ್ಯಕ್ಷ ಜಿ.ಎನ್.ರಾಮಚಂದ್ರ, ಗಮಕ ವಿದುಷಿ ನಿರ್ಮಲಾ ಪ್ರಸನ್ನ, ಸದಸ್ಯರುಗಳಾದ ಜಿ.ವಿ. ರಮೇಶ್, ಎ. ವಿ.ನಾಗೇಶ್, ಜಿ. ಎಚ್.ನರಸಿಂಹಯ್ಯ, ಶೈಲಜಾ ಗುಂಡೂರಾವ್ ಮತ್ತಿತರರು ಪಾಲ್ಗೊಂಡಿದ್ದರು. ಸಮ್ಮೇಳನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಹಿರಿಯ ದಂಪತಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.