

ಕಾರವಾರ: ಹಡಗಿನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಉತ್ತರ ಕನ್ನಡ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಬೆರಿವಾಲಾಬಾಗ್ ಆಜಾದ್ ಮಾರ್ಕೆಟ್‌ನ ಸಯ್ಯದ್ ಜುನೈದ್ ರಾಜಾ ಉಲ್‌ಹಕ್ ಬಂಧಿತ. ಕಾರವಾರ ಬೋಳಶಿಟ್ಟಾದ ಕರುಣಾಕರ್ ಕಮಲಾಕರ್ ತಳೇಕರ್ ಅವರು ನೀಡಿದ ದೂರನ್ನು ಆಧರಿಸಿ, ಸಿಇಎನ್ ಇನ್ಸ್ಪೆಕ್ಟರ್ ಕೆ.ಎಂ.ಷರೀಫ್ ನೇತೃತ್ವದ ತಂಡ ದೆಹಲಿಗೆ ತೆರಳಿ ಆರೋಪಿಯನ್ನು ಬಂಧಿಸಿದೆ.
ಹಿನ್ನೆಲೆ:
ಕರುಣಾಕರ್ ಅವರು "ಡಿಸ್ನಿ ಕ್ರೂಸ್ ಲೈನ್" ಎಂಬ ಹೆಸರಿನ ಶಿಪ್‌ನಲ್ಲಿ ಉದ್ಯೋಗ ಇರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ನೋಡಿ, ಅಲ್ಲಿದ್ದ ಮೊಬೈಲ್ ನಂಬರ್‌ನ್ನು ಸಂಪರ್ಕಿಸಿದ್ದರು. ಅತ್ತಲಿಂದ ಮಾತನಾಡಿದ ವ್ಯಕ್ತಿ ಉದ್ಯೋಗ ಇದೆ ಎಂದು ಹೇಳಿ ಆನ್‌ಲೈನ್ ಪರೀಕ್ಷೆ, ಸಂದರ್ಶನ ಮಾಡಿದ್ದ. ಸದ್ಯ ಸೀ-ಮೆನ್ ಎಂಬ ಹುದ್ದೆಗೆ ನೇಮಕ ಮಾಡುವುದಾಗಿ ತಿಳಿಸಿ ಹಂತ, ಹಂತವಾಗಿ 75.19 ಲಕ್ಷ ರೂ.ಗಳನ್ನು ಪಡೆದು ನೌಕರಿ ನೀಡದೇ ಮೋಸ ಮಾಡಿದ್ದ. ಈ ಬಗ್ಗೆ ಜ.31 ರಂದು ದೂರು ದಾಖಲಾಗಿತ್ತು.