ಗ್ರಂಥಗಳ ಓದಿನಿಂದ ಅಜ್ಞಾನ ನಿವಾರಣೆ : ಶಾಮಾನಂದ ಪೂಜೇರಿ ಅಭಿಮತ

Sudhee_05_Book_Release_@_Ka_Sa_Pa (4)
Published on

ಬೆಂಗಳೂರು: ಉತ್ತಮ ಗ್ರಂಥಗಳನ್ನು ಓದುವುದರಿಂದ ಅಜ್ಞಾನದ ನಿವಾರಣೆಯಾಗಿ ಜ್ಞಾನ ದೊರೆಯುತ್ತದೆ ಎಂದು ಹುಬ್ಬಳಿಯ ಸಿದ್ಧಾರೂಢ ಆಶ್ರಮದ ಟ್ರಸ್ಟಿ ಶಾಮಾನಂದ ಪೂಜೇರಿ ಹೇಳಿದ್ದಾರೆ.

ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಉದಯ ಪ್ರಕಾಶನ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಸಂಪಾದನೆಯ ಚಿದಾನಂದಾವಧೂತರ ವೇದಾಂತ ಕಾವ್ಯ ‘ಜ್ಞಾನಸಿಂಧು’ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ಮನುಷ್ಯನಿಗೆ ಲೌಕಿಕ ಜ್ಞಾನದಷ್ಟೇ ಪಾರಲೌಕಿಕ ಜ್ಞಾನದ ಅಗತ್ಯವೂ ಇದೆ. ಅದಕ್ಕಾಗಿ ಮಲ್ಲೇಪುರಂ ಅವರ ಈ ಗ್ರಂಥ ಉತ್ತಮವಾಗಿದೆ ಎಂದು ಹೇಳುತ್ತ, ಗ್ರಂಥದ ಒಂದೊಂದು ಪ್ರಕರಣಗಳನ್ನು ಸರಳವಾಗಿ ಪರಿಚಯಿಸಿದರು. 49 ಪ್ರಕರಣ ಗ್ರಂಥಗಳಿಂದ ಕೂಡಿರುವ ‘ಜ್ಞಾನಸಿಂಧು’ ತೋರಣನಾಂದಿ ಎಂಬ ಸೊಗಸಾದ ಪ್ರಸ್ತಾವನೆ ಹೊಂದಿದೆ. ಇದರಲ್ಲಿ ಅವಧೂತರು ಹುಟ್ಟಿದ್ದು, ಬೆಳೆದದ್ದು, ಮಾಡಿದ ಕೆಲಸ, ಅವರ ಗ್ರಂಥಗಳ ರಚನೆ ಕುರಿತು ಸಮಗ್ರ ಮಾಹಿತಿ ಒಳಗೊಂಡಿದೆ. ಇದನ್ನು ಪರಿಷ್ಕರಿಸುವುದು, ರಚಿಸಲು, ಟಿಪ್ಪಣಿ ಬರೆಯುವುದು ಸುಲಭವಲ್ಲ. ನಿರಂತರ ಅಧ್ಯಯನ, ಪಾಂಡಿತ್ಯವೂ ಬೇಕು ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಕರ್ನಾಟಕದ ಅವಧೂತ ಪರಂಪರೆಯಲ್ಲಿ ನಿಜಗುಣ ಶಿವಯೋಗಿಗಳು, ಮಹಾಲಿಂಗ ರಂಗ, ಚಿದಾನಂದಾವಧೂತರು ಪ್ರಮುಖರು. ಇವರ ಕುರಿತು ಈಗಾಗಲೇ ‘ಅನುಭವಾಮೃತ ಬ್ರಹ್ಮಯಾನ’ ಗ್ರಂಥ ಬರೆದಿದ್ದೆ. ‘ಜ್ಞಾನಸಿಂಧು’ ನನ್ನ 101ನೇ ಕೃತಿ. 800 ಪುಟಗಳ ಬೃಹತ್ ಗ್ರಂಥ. ಇದನ್ನು ಲೋಕಾರ್ಪಣೆ ಮಾಡುವ ಯೋಗ ನನಗೆ ದೊರೆತಿರುವುದು ನನ್ನ ಪುಣ್ಯ ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಅವರು, ಡಾ. ಎಚ್. ಎಸ್. ಗೋವರ್ಧನಗೆ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಹಾಗೂ ಡಾ. ಸಿ. ಚಂದ್ರಪ್ಪಗೆ ‘ಪ್ರೊ. ಮಲ್ಲೇಪುರಂ ಪುಸ್ತಕ ಬಹುಮಾನ’ ಪ್ರದಾನ ಮಾಡಿದರು. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net