ಆಮೆಗತಿಯಲ್ಲಿ ಸಾಗುತ್ತಿದೆ ಜೆಜೆಎಂ ಕಾಮಗಾರಿ

FotoJet (1)
Published on

ಶೀಘ್ರ ಪೂರ್ಣಗೊಳಿಸುವಂತೆ ತಿಳಿಸಿದ ಶಾಸಕ ಸುಬ್ಬಾರೆಡ್ಡಿ ಪ್ರಗತಿಯ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ಬಾಗೇಪಲ್ಲಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಗುರುವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಆರೋಗ್ಯ ಸೇವೆ, ಕಾಮಗಾರಿಗಳ ವಿಳಂಬ, ಜಲಜೀವನ್ ಮಿಷನ್ ಯೋಜನೆ, ಕುಡಿಯವ ನೀರು ಸೇರಿ ವಿವಿಧ ವಿಷಯಗಳ ಬಗ್ಗೆ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಜಲಜೀವನ್ ಮಿಷನ್ ಯೋಜನೆ ಬಗ್ಗೆ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಗಾಗಿ ಅಗೆದಿರುವ ಸಿಮೆಂಟ್ ರಸ್ತೆಗಳನ್ನು ಸರಿಪಡಿಸದೆ ಹಾಗೆ ಬಿಟ್ಟಿರುವ ಬಗ್ಗೆ ದೂರುಗಳು ಬಂದಿವೆ. ಜೆಜೆಎಂ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಪ್ರಗತಿಯ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಮನೀಷಾ, ತಾಪಂ ಇಒ ಜಿ.ವಿ. ರಮೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾಧ್ರಿ, ನರೇಗಾ ಸಹಾಯಕ ನಿರ್ದೇಶಕ ನಾರಾಯಣ, ಕೆಡಿಪಿ ಸದಸ್ಯರಾದ ಜೆಸಿಬಿ ಮಂಜುನಾಥರೆಡ್ಡಿ, ರಘುನಾಥರೆಡ್ಡಿ, ರಾಮಕೃಷ್ಣ ಹೆಗಡೆ, ರಿಜ್ವಾನ್ ಬಾಷಾ, ಸರಿತಾ ಮತ್ತಿತರರು ಇದ್ದರು.

ಚೆಕ್‌ಡ್ಯಾಂ ಕಾಮಗಾರಿಯಲ್ಲಿ ಅವ್ಯವಹಾರ

ಕೃಷಿ ಇಲಾಖೆ ವತಿಯಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿರುವ ಚೆಕ್‌ಡ್ಯಾಂಗಳು ನರೇಗಾ ಯೋಜನೆಯ ಕಾಮಗಾರಿಗಳೆಂದು ಸಾರ್ವಜನಿಕರು ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಚೆಕ್‌ಡ್ಯಾಂ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದಾಗ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಚೆಕ್‌ಡ್ಯಾಂ ಕಾಮಗಾರಿಗಳ ಅವ್ಯವಹಾರದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ಸಹಾಯಕ ಕೃಷಿ ನಿರ್ದೇಶಕರಿಗೆ ತಿಳಿಸಿದರು.

ಆರೋಗ್ಯ ಸೇವೆ ಮೇಲ್ದರ್ಜೆಗೆ

ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸುವ ಬಡ ರೋಗಿಗಳಿಗೆ ಆರೋಗ್ಯ ಹಾಗೂ ಆಂಬುಲೆನ್ಸ್ ಸೇವೆ ಸಿಗುತ್ತಿಲ್ಲ ಎಂಬ ದೂರು ಇದೆ. ಜತೆಗೆ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹಾಗೂ ತಾಲೂಕು ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಆಂಬುಲೆನ್ಸ್‌ಗಳ ಕೊರತೆಯಿದೆ. ಈ ಸಮಸ್ಯೆ ನೀಗಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಶಾಸಕರಿಗೆ ಮನವಿ ಮಾಡಿದರು. ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಅಶ್ರಯ ಯೋಜನೆ ಅನುಷ್ಠಾನಕ್ಕೆ ಸೂಚನೆ

ವಸತಿರಹಿತರಿಗೆ ಮನೆ ಮಂಜೂರು ಮಾಡಲು ಸರ್ಕಾರ ಸಕಲ ಸಿದ್ಧತೆ ಮಾಡಿದ್ದರೂ ಗ್ರಾಪಂ ಪಿಡಿಒಗಳು ಇದುವರೆಗೂ ಮನೆ ಹಂಚಿಕೆ ಮಾಡಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯವೇ ಅಥವಾ ತಾಂತ್ರಿಕ ಸಮಸ್ಯೆಯೇ ಎಂಬುದು ತಿಳಿಯುತ್ತಿಲ್ಲ ಎಂದು ತಾಪಂ ಇಒ ರಮೇಶ್ ಅವರನ್ನು ಶಾಸಕರು ಪ್ರಶ್ನಿಸಿದರು. ಕೂಡಲೇ ಗ್ರಾಪಂ ಅಧಿಕಾರಿಗಳ ಸಭೆ ನಡೆಸಿ ಅಶ್ರಯ ಯೋಜನೆ ಅನುಷ್ಠಾನಕ್ಕೆ ಸೂಚಿಸಲಾಗುವುದು ಎಂದು ಇಒ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net