

ಮಾಗಡಿ: ಜಲ ಜೀವನ್ ಮಿಷನ್ ಯೋಜನೆಯಡಿ (ಜೆಜೆಎಂ)ಕಳಪೆ ಕಾಮಗಾರಿ ನಡೆದಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿ ತನಿಖೆ ನಡೆಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಜೆಎಂ ಯೋಜನೆ ನೆಲಕಚ್ಚಿದೆ. ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗಳಾದ ಗುರುಶಂಕರ್, ರವೀಂದ್ರ ಈ ಯೋಜನೆಯಲ್ಲಿ ಅಕ್ರಮ ಎಸಗಿದ್ದಾರೆ. ಅಲ್ಲದೆ ಅಂಗನವಾಡಿ, ಶಾಲಾ ಕಟ್ಟಡ ನಿರ್ಮಾಣದಲ್ಲಿ ಲೋಪ ಎಸಗಿದ್ದು, ಈ ಎಲ್ಲ ಕಟ್ಟಡಗಳ ಗುಣಮಟ್ಟ ಪರಿಶೀಲಿಸಲಾಗುವುದು ಎಂದರು.
ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ತನಿಖೆ ನಡೆಸಿ ಶಿಸ್ತು ಕ್ರಮಕೈಗೊಳ್ಳಲು ನಿರ್ಣಯ ಮಾಡಿ ಜಿಲ್ಲಾಧಿಕಾರಿಗೆ ಪತ್ರಬರೆಯಲಾಗುವುದು. ಜೆಜೆಎಂ ಯೋಜನೆಯಡಿ ಕಳಪೆ ಪೈಪ್‌ಲೈನ್ ಕಾಮಗಾರಿ ನಡೆಸಿದ್ದಾರೆ. ಬಹುತೇಕ ಕಡೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿಲ್ಲ, ಕಾಮಗಾರಿ ಅಪೂರ್ಣಗೊಂಡಿದ್ದರೂ ಪೂರ್ಣ ಹಣ ಪಾವತಿಸಲು ಗುತ್ತಿಗೆದಾರರು ನಿಮ್ಮ ಅಣ್ಣ, ತಮ್ಮಂದಿರ ಅಥವಾ ಮಾವ, ಭಾಮೈದರಾಗಿದ್ದಾರಾ. ಸರ್ಕಾರದ ಹಣ ದುರುಪಯೋಗಪಡಿಸಲು ನಿಮ್ಮ ಮನೆಯ ಹಣವೇ ಎಂದು ಇಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಮಶಾನ ಇಲ್ಲ ಎನ್ನದಿರಿ: ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಜಮೀನು ಗುರುತಿಸಿ ಕಾಂಪೌಂಡ್ ನಿರ್ಮಿಸಿ ಫಲಕ ಅಳವಡಿಸಿ. ಸ್ಮಶಾನ ಎಲ್ಲೂ ಇಲ್ಲ ಎಂದು ಹೇಳಬಾರದು, ಜಾಗದ ಲಭ್ಯತೆ ಇಲ್ಲದಿದ್ದರೆ ಎರಡು ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಿ ಎಂದು ಶಾಸಕರು, ತಹಸೀಲ್ದಾರ್‌ಗೆ ಸೂಚಿಸಿದರು.
ಸಸಿ ನೆಟ್ಟು ಪೋಷಿಸಿ: ಸಾಮಾಜಿಕ ವಲಯ ಅರಣ್ಯ ಇಲಾಖೆಗೆ ತಿರುಮಲೆ ಸೇರಿ ಇತರೆಡೆ 500 ಎಕರೆ ಜಾಗವಿದ್ದು, ಈ ಜಾಗದಲ್ಲಿ ಸಸಿನೆಟ್ಟು ಪೋಷಿಸಬೇಕು. ನ್ಯಾಷನಲ್ ಹೈವೇ ಬದಿಗಳಲ್ಲಿ ಏಕೆ ಸಸಿ ನೆಟ್ಟು ಪೋಷಿಸುತ್ತೀರಾ ಎಂದು ಪ್ರಶ್ನಿಸಿದ ಅವರು, ನಾನು 5 ಭಾರಿ ಶಾಸಕನಾಗಿದ್ದೇನೆ. ಇಲ್ಲಿಯವರೆಗೂ ಏಲ್ಲಿಯೂ ಒಂದು ಮರ ನೋಡಲಿಲ್ಲ. ರೈತರ ಬೇಡಿಕೆಗೆ ಅನುಗುಣವಾಗಿ ಸಸಿ ನೀಡಿ, ರೈತರಿಗೆ ಯಾವ ರೀತಿ ಸಸಿಬೇಕೆಂದು ಏಕೆ ಸಭೆ ಕರೆದಿಲ್ಲ. ಹರಾಜಾಗಿರುವ ಹಳೆಯ ಮರವನ್ನು 15 ದಿನಗಳ ಒಳಗೆ ತೆರವುಗೊಳಿಸಬೇಕು. ಶ್ರೀಗಿರಿಪುರ ಪಾರೆಸ್ಟ್ ಮಾಗಡಿ ತಾಲೂಕಿನಲ್ಲಿದ್ದು, ನಮ್ಮ ವ್ಯಾಪ್ತಿಗೆ ಸೇರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅರಣ್ಯಾಧಿಕಾರಿ ಚೈತ್ರಾಗೆ ಶಾಸಕರು ಸೂಚಿಸಿದರು.
ಗಾಂಧಿ ವೃತ್ತದಿಂದ ಗೌರಮ್ಮನ ಕೆರೆಯವರೆಗೆ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಗುಣಮಟ್ಟ ಇಲ್ಲದಿದ್ದರೆ ಮರು ನಿರ್ಮಿಸಿ ಎಂದು ಲೋಕೋಪಯೋಗಿ ಇಲಾಖೆ ಎಇಇಗೆ ತಾಕೀತು ಮಾಡಿದರು.
ಮಂಚನಬೆಲೆ ಜಲಾಶಯದ ಬಳಿಯ ಬ್ರಿಜ್ ಕಾಮಗಾರಿ ಟೆಂಡರ್ ನಡೆದಿದ್ದು, ಕಾಮಗಾರಿ ಆರಂಭಿಸುವಂತೆ ಎಇಇಗೆ ಸೂಚಿಸಿ. ಕುದೂರು ನಾಡಕಚೇರಿಯಲ್ಲಿ ಇ-ಕಚೇರಿ ಆರಂಭಿಸಿ ತಹಸೀಲ್ದಾರ್ ಸಂಬಂಧಪಟ್ಟ ಅರ್ಜಿಗಳನ್ನು ಸ್ವೀಕರಿಸಿ ಎಂದು ಶಾಸಕರು ಸೂಚಿಸಿದರು.
13 ಪಶು ವೈದ್ಯರಿದ್ದು, ತಿಪ್ಪಸಂದ್ರ ಆಸ್ಪತ್ರೆಗೆ ಕಾಯಂ ವೈದ್ಯರನ್ನು ಏಕೆ ನೇಮಿಸಿಲ್ಲ, ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಪಶುವೈದ್ಯಾಧಿಕಾರಿ ಜಯಶ್ರೀ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಿಇಒಗೆ ಪತ್ರ : ಶಾಲಾ ಮಕ್ಕಳಿಗೆ ಮೊಟ್ಟೆ ಖರೀದಿಸುವ ವೇಳೆ ಹೆಚ್ಚಿನ ಬೆಲೆಗೆ ಬೇಡಿಕೆ ಇಡುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು. ವಿವೇಕಾನಂದ ಶಾಲಾ ಕಟ್ಟಡಗಳು ಅಪೂರ್ಣಗೊಳ್ಳಲು ಜಿಪಂ ಇಂಜಿನಿಯರ್‌ಗಳ ಬೇಜವಾಬ್ದಾರಿ ಕಾರಣ. ಇದರ ವಿರುದ್ಧ ಸಮಗ್ರ ತನಿಖೆ ನಡೆಸಲು ಸಿಇಒಗೆ ಪತ್ರ ಬರೆಯಲಾಗುವುದು ಎಂದು ಶಾಸಕರು, ನೂತನ ಸದಸ್ಯರು ಸಭೆಗೆ ಸೀಮಿತರಾಗದೆ, ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಿ, ಆಡಳಿತಕ್ಕೆ ಚುರುಕು ಮೂಡಿಸಿ ಎಂದು ಕಿವಿಮಾತು ಹೇಳಿದರು.
ಕೆಡಿಪಿ ಸದಸ್ಯರಾದ ವೆಂಕಟೇಶ್, ಗೀತಾ, ಮುನಿರ್ ಆಹಮದ್, ಪ್ರಕಾಶ್, ಕೃಷ್ಣಪ್ಪ, ಎಡಿಎಲ್ ಆರ್. ಆನಂದ್ ಇದ್ದರು.