ಜೆಜೆಎಂನಲ್ಲಿ ಕೋಟ್ಯಂತರ ರೂ. ಲೂಟಿ : ಶಾಸಕ ಎಚ್.ಸಿ.ಬಾಲಕೃಷ್ಣ ಆರೋಪ

gggg
Published on

ರಾಮನಗರ: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (ಜೆಜೆಎಂ) ಉತ್ತಮ ಯೋಜನೆ. ಆದರೆ, ಅಧಿಕಾರಿಗಳು ಇದನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ, ಜನರಿಗೆ ನೀರು ಕೊಡುವ ಹೆಸರಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಆಗ್ರಹಿಸಿದರು.

ನಗರದ ಜಿಪಂ ಸಭಾಗಂಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ವಿಷಯದ ಚರ್ಚೆ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ನೀಡಿದ ಮಾಹಿತಿಯಿಂದ ಆಕ್ರೋಶಗೊಂಡ ಬಾಲಕೃಷ್ಣ ಸಮಸ್ಯೆಗಳ ಅನಾವರಣ ಮಾಡಿದರು.

ಜೆಜೆಎಂನಡಿ ಎಷ್ಟು ಮನೆಗಳಿಗೆ ನೀರು ಕೊಡುತ್ತಿದ್ದೀರಿ? ಪೈಪ್‌ಲೈನ್ ಅಳವಡಿಕೆ ಎಷ್ಟಾಗಿದೆ?, ಮೇಲ್ಮಟ್ಟದ ನೀರು ಸಂಗ್ರಹಗಾರ ಟ್ಯಾಂಕ್‌ಗಳನ್ನು ನಿರ್ಮಿಸಿದ್ದೀರಾ? ಎನ್ನುವ ಪ್ರಶ್ನೆಗಳನ್ನು ಹಾಕಿದರು. ಈ ವೇಳೆ ಅಧಿಕಾರಿಗಳು ಟ್ಯಾಂಕ್ ನಿರ್ವಾಣ ಆಗಿಲ್ಲ, ಪೈಪ್‌ಲೈನ್ ಅಳವಡಿಕೆ ನಡೆಯುತ್ತಿದೆ ಎನ್ನುವ ಉತ್ತರದಿಂದ ಕೆರಳಿದ ಶಾಸಕರು, ನೀವು ಏನು ಕೆಲಸ ವಾಡಿದ್ದೀರೆಂದು ಗೊತ್ತಿದೆ. ವಾಗಡಿಯಲ್ಲಿ ಒಂದೇ ಒಂದು ಟ್ಯಾಂಕ್ ನಿರ್ಮಿಸದೆ ಬೇಕಾದ ಕಡೆ ಪೈಪ್‌ಲೈನ್ ಕಾಮಗಾರಿ ಹೆಸರಿನಲ್ಲಿ ರಸ್ತೆ ಅಗೆದು ಹಣ ಲೂಟಿ ಹೊಡೆಯುತ್ತಿದ್ದೀರಿ. ಸಭೆಗೆ ನೀರು ಕೊಡುತ್ತಿದ್ದೇವೆ ಎಂದು ಹೇಳುತ್ತೀರಾ? ಎಂದು ತರಾಟೆಗೆ ತೆಗೆದುಕೊಂಡರು. ಅವರ ವಾತಿಗೆ ಇತರ ಶಾಸಕರು ಮತ್ತು ವಿಧಾನ ಪರಿಷ್‌ತ್ ಸದಸ್ಯರು ದನಿಗೂಡಿಸಿದರು.

ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಜೆಜೆಎಂ ಕಾಮಗಾರಿಗೆ ಏಳೆಂಟು ಸಲ ಟೆಂಡರ್ ಕರೆದರೂ ಯಾರೂ ಬರುತ್ತಿಲ್ಲ. ವಿಧಿ ಇಲ್ಲದೆ, ಕಪ್ಪುಪಟ್ಟಿಗೆ ಸೇರಿರುವ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟು ಕೆಲಸ ವಾಡಿಸಬೇಕಾಗಿದೆ. ಶಾಸಕರು ಹೇಳುವಂತೆ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಆರೋಪ ಕುರಿತು ತನಿಖೆ ನಡೆಸಲಾಗುವುದು ಎನ್ನುವ ಸಮಜಾಷಿ ನೀಡಿದರು.

ಜೆ.ಡಿ ವಿರುದ್ಧ ಕ್ರಮಕ್ಕೆ ಶ್ರೀನಿವಾಸ್ ಪಟ್ಟು: ಉದ್ದೇಶ ಪೂರ್ವಕವಾಗಿಯೇ ತಮ್ಮನ್ನು ಸವಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಕಡೆಗಣಿಸುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹಕ್ಕುಚ್ಯುತಿ ಮಂಡಿಸುವುದಾಗಿ ನೆಲಮಂಗಲ ಶಾಸಕ ಶ್ರೀನಿವಾಸ್ ಒತ್ತಾಯಿಸಿದ ಪ್ರಸಂಗಕ್ಕೆ ಕೆಡಿಪಿ ಸಾಕ್ಷಿ ಆಯಿತು.

ಶಿವಕುವಾರ್ ಅವರು ಸೋಲೂರಿನಲ್ಲಿ ನಡೆದ ಅಂಬೇಡ್ಕರ್ ಜಾಥಾಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಸಚಿವರ ನೇತತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ. ಸಂಬಂಧಿಸಿದ ಕೆಲಸಗಳ ಕುರಿತು ವಾತನಾಡುವುದಕ್ಕೂ ಎಸ್‌ಪಿ ಸಿಗುತ್ತಿಲ್ಲ. ಕರೆ ಮಾಡಿದರೂ ಉತ್ತರ ನೀಡುತ್ತಿಲ್ಲ, ತಮ್ಮನ್ನು ಭೇಟಿ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಶಿವಕುಮಾರ್ ನನ್ನಿಂದ ಯಾವುದೇ ತಪ್ಪಾಗಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾದರೂ ಇದನ್ನು ಒಪ್ಪದ ಶಾಸಕರು, ನಿಮ್ಮ ನಡೆ ವಿರುದ್ಧ ಇಲಾಖೆಗೂ ಪತ್ರ ಬರೆದಿರುವೆ. ಕ್ರಮ ಆಗದಿದ್ದರೆ ನಾನು ಸುಮ್ಮನಿರುವುದಿಲ್ಲ ಎಂದರು.

ಶಾಸಕ ಇಕ್ಬಾಲ್ ಹುಸೇನ್, ಎಂಎಲ್‌ಸಿ ಎಸ್. ರವಿ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಶಾಸಕರನ್ನು ಕಡೆಗಣಿಸುವ ವರ್ತನೆ ಸರಿಯಲ್ಲ, ಇದನ್ನು ಸರಿಪಡಿಸಿಕೊಳ್ಳಿ. ಇಬ್ಬರು ಏನೇ ಇದ್ದರೂ ಶಾಸಕರು ಮತ್ತು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ವಾತನಾಡಿ ಬಗೆಹರಿಸಿಕೊಳ್ಳಿ ಎನ್ನುವ ಮೂಲಕ ಕಾವೇರಿದ ಚರ್ಚೆಗೆ ತೆರೆ ಎಳೆದರು.

ಪುಡಿ ರೌಡಿಗಳ ಹಾವಳಿ ನಿಯಂತ್ರಿಸಿ : ಜಿಲ್ಲೆಯಲ್ಲಿ ಇತ್ತೀಚೆಗೆ ಪುಂಡರು ಹಾಗೂ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಜತೆಗೆ ಗಾಂಜಾ ಸೇರಿ ವಾದಕ ವಸ್ತುಗಳ ಸೇವನೆ, ಕ್ರಿಕೆಟ್ ಬೆಟ್ಟಿಂಗ್, ಮೀಟರ್ ಬಡ್ಡಿ ದಂಧೆ ಹೆಚ್ಚಾಗಿದೆ. ಅವರಿಂದ ನಮ್ಮ ನೆಮ್ಮದಿ ಹಾಳಾಗಿದೆ.
ಮಕ್ಕಳ ಕ್ರಿಕೆಟ್ ಬೆಟ್ಟಿಂಗ್‌ನಿಂದಾಗಿ ಎಷ್ಟೋ ಕುಟುಂಬಗಳು ಸಾಲ ತೀರಿಸಲು ತಮ್ಮ ಜಮೀನು ವಾರಿವೆ. ಈ ಕುರಿತು, ನ್ಯಾಯ ಪಂಚಾಯಿತಿ ವಾಡಿ ಸಾಕಾಗಿದೆ. ಪೊಲೀಸರು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿಯಂತ್ರಿಸಬೇಕುಎಂದು ಎಂಎಲ್‌ಸಿ ಎಸ್. ರವಿ ಒತ್ತಾಯಿಸಿದರು.ಸಭೆಯಲ್ಲಿ ರಾಮೋಜಿಗೌಡ, ಸುಧಾಮ್‌ದಾಸ್, ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಸೂರಜ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ಕೆಡಿಪಿ ನಾಮ ನಿರ್ದೇಶನ ಸದಸ್ಯೆ ಸುಕನ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಸೆ. 15ರಿಂದ ನಿರಂತರ ನೀರು: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ರಾಮನಗರಕ್ಕೆ ಎಕ್ಸ್‌ಪ್ರೆಸ್ ಪೈಪ್‌ಲೈನ್ ಮೂಲಕ ಇನ್ನೂ ನೀರು ಸರಬರಾಜು ಮಾಡದಿರುವುದಕ್ಕೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.
ಸರಿಯಾಗಿ ನೀರು ಕೊಡುತ್ತಿಲ್ಲ, ಕಿತ್ತಿರುವ ರಸ್ತೆಗಳನ್ನು ಮುಚ್ಚುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಏನು ಉತ್ತರ ಕೊಡಬೇಕು ಎನ್ನುವಂತೆ ಆಗಿದೆ. ರಸ್ತೆ ರಿಪೇರಿಗೆ ಕೊಟ್ಟಿರುವ ಹಣವನ್ನು ನಗರಸಭೆಗೆ ಕೊಡಿ ಎಂದರೆ ಆ ಹಣವನ್ನು ಕೊಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರ ಹೊರಹಾಕಿದರು.

ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ರಾಮನಗರಕ್ಕೆ 24/7 ನಿರಂತರ ನೀರು ಪೂರೈಕೆಗೆ ಚಾಲನೆ ನೀಡಲು ಸಿದ್ಧತೆ ವಾಡಿಕೊಳ್ಳಿ, ಸೆ.15ರಿಂದ ನಿರಂತರವಾಗಿ ನಗರದ ಜನತೆಗೆ ನೀರು ಕೊಡಬೇಕು. ಅದೇ ರೀತಿ ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಬೇಕು, ಈ ಹಣವನ್ನು ನಗರಸಭೆಗೆ ಕೊಡಿ ಎಂದು ಸಲಹೆ ನೀಡಿದರು. ಈ ವೇಳೆ ಮಂಡಳಿ ಅಧಿಕಾರಿಗಳು ಮಾತನಾಡಿ, ಅಗೆದಿರುವ ಜಾಗ ಮುಚ್ಚಲು ವಾತ್ರ ನಮಗೆ ಅವಕಾಶವಿದೆ. ಆದರೂ, ನಾವು ರಸ್ತೆ ದುರಸ್ತಿ ವಾಡುತ್ತಿದ್ದೇವೆ. ಅದಕ್ಕಾಗಿ 12 ಕೋಟಿ ರೂ. ಇದ್ದು, ಈಗಾಗಲೇ ದುರಸ್ತಿ ಕೆಲಸ ಪ್ರಗತಿಯಲ್ಲಿದೆ. ನಗರಸಭೆಗೆ ಹಣ ಕೊಡಲು ಮಂಡಳಿ ಮೇಲಧಿಕಾರಿಗಳು ಒಪ್ಪಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net