ಬದಲಾಗುತ್ತಿರುವ ಜಗತ್ತಿನಲ್ಲಿ ಹೊಂದಾಣಿಕೆ ಮುಖ್ಯ: ಸಚಿವ ದಿನೇಶ್​ ಗುಂಡೂರಾವ್​ ಅಭಿಮತ

AAAA
Published on

ಬೆಂಗಳೂರು: ಮುಂದುವರಿಯುತ್ತಿರುವ ಜಗತ್ತಿನಲ್ಲಿ ಕುಲಕಸುಬನ್ನೇ ನಂಬಿಕೊಂಡು ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ಒಪ್ಪಿಕೊಂಡು ಮುಂದುವರಿಯುತ್ತಿರಬೇಕು ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ಸಂಯುಕ್ತ ಸ್ವಕುಳಸಾಳಿ ಸಂಘ ನಗರದ ಕೆಪಿಟಿಸಿಎಲ್​ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಗವಾನ್​ ಶ್ರೀ ಜಿಹ್ವೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸಿದ್ದರೆ ಬದಲಾವಣೆಗೆ ಅನುಸಾರವಾಗಿ ಜೀವನ ರೂಪಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಹೊಸತನವನ್ನು ಒಪ್ಪದೆ ಇದ್ದಲ್ಲಿ ಸಮಾಜದಲ್ಲಿ ಹಿಂದೆ ಬೀಳುತ್ತೇವೆ. ಇದರಿಂದ ಬದುಕು ಅವನತಿಯತ್ತ ಸಾಗುತ್ತದೆ ಎಂದರು.

ನೇಕಾರಿಕೆ ಕುಲಕಸುಬನ್ನು ಮುಂದುವರಿಸಿಕೊಂಡು ಹೋಗಲು ಸಾಕಷ್ಟು ಸವಾಲುಗಳಿವೆ. ಹೀಗಿರುವಾಗ ಮುಂದಿನ ತಲೆಮಾರಿನ ಭವಿಷ್ಯ ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರವಾಗಿ ಬದಲಾವಣೆಯನ್ನು ಸ್ವಾಗತಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಶಕ್ತಿ ತುಂಬುವ ಕೆಲಸವನ್ನು ಸಂಯುಕ್ತ ಸ್ವಕುಳಸಾಳಿ ಸಮಾಜ ಮಾಡುತ್ತಿದೆ. ವಸತಿ ಸಚಿವರ ಜತೆ ಮಾತುಕತೆ ನಡೆಸಿ ಶ್ರೀದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಭಗವಾನ್​ ಜಿಹ್ವೇಶ್ವರ ಅವರು ಜಗತ್ತಿಗೆ ನಾಗರಿಕತೆಯನ್ನು ಪರಿಚಯಿಸಲು ಬಂದವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ನೇಕಾರರ ಕುಲ ಕಸುಬು ಉಳಿಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಂ&ಸಂಸ್ಥೆಗಳ ಪಾತ್ರ ಮಹತ್ವದ್ದು. ಹಿಂದಿನ ತಲೆಮಾರು ಕುಲಕಸುಬನ್ನೇ ಮುಂದುವರಿಸಿ ಜೀವನ ರೂಪಿಸಿಕೊಂಡರು. ಇಂದು ರಾಜಕೀಯ ವಿದ್ಯಾಮಾನ ಹಾಗೂ ಪ್ರವರ್ಧಮಾನಕ್ಕೆ ಬೇಕಾದ ಸಾಮಾಗ್ರಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಆರ್ಥಿಕ ಸಬಲೀಕರಣ ಸಾಧ್ಯವಾಗದೆ ಕುಲಕಸಬುಗಳು ನಶಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜ ಸೇವಕರಾದ ಮಾತೃಭಾಯಿ ರಾಮರಾವ್​ ಮಲ್ಲಿಕಾರ್ಜುನ, ಅಹಲ್ಯಾಬಾಯಿ ವಿಶ್ವನಾಥ ದಿವಟೆ, ಎಚ್​.ಪಿ. ಮಧುಕರ ವಾಂಜ್ರೆ, ವೈದ್ಯೆ ಡಾ. ಸಂತೋಷಕುಮಾರಿ ಕೆಂದೋಳೆ, ವಿಧಾನಸೌಧದ ನಿವೃತ್ತ ಉಪಕಾರ್ಯದರ್ಶಿ ರಾಮಕೃಷ್ಣ ಸರೋದೆ, ಉದ್ಯಮಿ ಯೊಗೇಶ್​ ಸರೋದೆ, ಇಂಜಿನಿಯರ್​ ಶ್ವೇತಾ ಮಧುಕರ್​ ಶೇಂದ್ರೆ, ಸಿಎ ಗೌತಮ್​ ಗಿರಿಧರ್​ ಕೆಂದೋಳೆ, ಕಿರುತೆರೆ ನಟಿ ಶಿಲ್ಪಾ ಸವ್ವಾಸೇರೆ ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಶ್ರೀ ಮದ್ಭಗವದ್ಗೀತಾ ಗುರುಕುಲಾಶ್ರಮ ಸಂಸ್ಥಾನದ ಸದ್ಗುರು ರಮಣಾನಂದಗಿರಿ ಸ್ವಾಮೀಜಿ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ಸಂಯುಕ್ತ ಸ್ವಕುಳಸಾಳಿ ಸಂದ ಅಧ್ಯಕ್ಷ ಪ್ರದಿಪ್​ ರೋಖಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net