

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಒಬ್ಬಂಟಿ ಮಹಿಳೆಯೊಬ್ಬರು ವಾಸವಿದ್ದ ಮನೆಯಿಂದ ಮಂಗಳವಾರ ನಡೆದಿದ್ದ 31 ಗ್ರಾಂ ತೂಕದ ಚಿನ್ನಾಭರಣ ಮತ್ತು 5 ಸಾವಿರ ರೂ. ಕಳವು ಪ್ರಕರಣದ ಆರೋಪಿಯನ್ನು ಸಂಪ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ನಿವಾಸಿ ದಯಾನಂದ ನಾಯ್ಕ ಎ.(29) ಬಂಧಿತ. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಕಚೇರಿ ಬಳಿಯ ಕೃಷ್ಣರಾಯ ನಿಲಯದ ಶೋಭಾ ಅವರ ಮನೆಯಿಂದ ಮಂಗಳವಾರ ಹಾಡಹಗಲೇ ಕಳ್ಳತನ ನಡೆದಿತ್ತು. ಮನೆ ಹಿಂಬಾಗಿಲನ್ನು ತೆರೆದು ಒಳನುಗ್ಗಿ ಕಳವು ಮಾಡಲಾಗಿತ್ತು. ಪೊಲೀಸರು ಆರೋಪಿಯಿಂದ 30.120 ಗ್ರಾಂ ತೂಕದ ಚಿನ್ನಾಭರಣ ಮತ್ತು ಕಳ್ಳತನ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಕೆಂಪುಕಲ್ಲು ಸಾಗಾಟದ ಲಾರಿಯಲ್ಲಿ ಲೋಡರ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದ 3 ತಿಂಗಳಿನಿಂದ ಕೆಲಸವಿಲ್ಲದೆ ತಿರುಗಾಡುತ್ತಿದ್ದನು.