ಮೂರು ತಿಂಗಳು ಕಳೆದರೂ ಪತ್ತೆಯಾಗದ ಕಳ್ಳರು

NLM SBI
Published on

ನ್ಯಾಮತಿ: ರಾಜ್ಯದ ವಿವಿಧೆಡೆ ಎಟಿಎಂ, ಬ್ಯಾಂಕ್ ದರೋಡೆ ಪ್ರಕರಣಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ, ಮೂರು ತಿಂಗಳ ಹಿಂದೆ ಪಟ್ಟಣದ ಎಸ್​ಬಿಐ ಬ್ಯಾಂಕ್​ನಲ್ಲಿ ನಡೆದ ಕಳವು ಪ್ರಕರಣ ಮತ್ತೆ ನೆನಪಾಗುತ್ತಿದೆ.

ಕಳ್ಳರ ಪತ್ತೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ರಚಿಸಿ ಹೊರ ರಾಜ್ಯಗಳಲ್ಲೂ ಶೋಧ ಕಾರ್ಯ ಮುಂದುವರಿಸಿದ್ದರೂ ಫಲ ಮಾತ್ರ ಶೂನ್ಯ.

ಜುಲೈ ತಿಂಗಳಿನಲ್ಲಿ ತಾಲೂಕಿನ ವಿವಿಧೆಡೆ ಸರಣಿ ಮನೆ ಹಾಗೂ ದೇವಾಲಯಗಳ ಕಳ್ಳತನದ ಬಳಿಕ ಬ್ಯಾಂಕ್ ಅನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್​ನ 509 ಜನ ಗ್ರಾಹಕರು ಅಡವಿಟ್ಟ ಸುಮಾರು 12.95 ಕೋಟಿ ರೂ. ಮೌಲ್ಯದ 17 ಕೆಜಿಗೂ ಅಧಿಕ ಚಿನ್ನಾಭರಣ ಮಂಗಮಾಯವಾಗಿತ್ತು. ಬ್ಯಾಂಕ್ ತುಂಬೆಲ್ಲ ಖಾರದ ಪುಡಿ ಎರಚುವ ಮೂಲಕ ಚೋರರು ಶ್ವಾನ ದಳದ ದಾರಿ ತಪ್ಪಿಸುವುದಲ್ಲದೇ, ಮುಖ್ಯ ಸಾಕ್ಷಿಯಾಗಬಲ್ಲ ಸಿಸಿ ಟಿವಿ ಡಿವಿಆರ್​ನೊಂದಿಗೆ ಪರಾರಿಯಾಗಿದ್ದರು.

ಅಕ್ಟೋಬರ್​ನಲ್ಲಿ ಘಟನೆ ನಡೆದಿದ್ದರೂ ಬ್ಯಾಂಕ್​ನವರು ಸೌಜನ್ಯಕ್ಕೂ ಗ್ರಾಹಕರ ಸಭೆ ಕರೆದಿಲ್ಲ. ಒಮ್ಮೆ ಮಾತ್ರ ಬ್ಯಾಂಕ್ ಅಧಿಕಾರಿಗಳು ಶೇ.60 ಅನುಪಾತದಲ್ಲಿ ಹಣ ನೀಡಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಿದ್ದರು. ಪ್ರಸ್ತುತ ದರದ ಅನುಪಾತದಲ್ಲಿ ಹಣ ನೀಡುವಂತೆ ಒತ್ತಡ ಬಂದಾಗ ಸಭೆ ಮುಂದೂಡಲಾಗಿತ್ತು.

ಆನಂತರ ಪ್ರತಿಭಟನೆ ನಡೆಸಿ ಬ್ಯಾಂಕ್ ಮುಖ್ಯಸ್ಥರು ಹಾಗೂ ನ್ಯಾಮತಿ ದಂಡಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ. ಇನ್ನೂವರೆಗೂ ಬ್ಯಾಂಕ್ ಮುಖ್ಯಸ್ಥರಿಂದ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ ಆಭರಣ ಕಳೆದುಕೊಂಡ ಗ್ರಾಹಕರು.

ಬ್ಯಾಂಕ್ ಮ್ಯಾನೇಜರ್ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬ್ಯಾಂಕ್ ವಿರುದ್ಧ ಕಾನೂನಾತ್ಮಕವಾಗಿ ನಷ್ಟ ಭರಿಸಿ ನಮ್ಮ ಆಭರಣ ನೀಡುವಂತೆ ಕೋರ್ಟ್ ಮೋರೆ ಹೋಗಲು ನಿರ್ಧರಿಸಿದ್ದೇವೆ. |ತೀರ್ಥಲಿಂಗಪ್ಪ, ಬ್ಯಾಂಕ್ ಗ್ರಾಹಕ.

ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತಂಡ ರಚಿಸಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶದಲ್ಲಿ ಸುಮಾರು 20 ದಿನಗಳ ಕಾಲ ತಪಾಸಣೆ ನಡೆಸಲಾಗಿದೆ. ಡಿಜಿಟಲ್ ಸಾಕ್ಷ್ಯ ನಾಶದಿಂದ ಅಡೆತಡೆ ಉಂಟಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು.

|ಎನ್.ಎಸ್.ರವಿ, ಇನ್ಸ್​ಪೆಕ್ಟರ್, ನ್ಯಾಮತಿ ಪೊಲೀಸ್ ಠಾಣೆ.

ಪತ್ತೆಗೆ ಸವಾಲಾದ ತೊಡಕುಗಳು

  • ಕೃತ್ಯದ ನಂತರ ಬ್ಯಾಂಕ್ ತುಂಬ ಖಾರದ ಪುಡಿ ಎರಚಿದ್ದು
  • ಕೃತ್ಯಕ್ಕೂ ಮುನ್ನ ಬ್ಯಾಂಕ್ ಸೈರನ್ ಕಡಿತಗೊಳಿಸಿರುವ ಸಾಧ್ಯತೆ
  • ಸಿಸಿ ಟಿವಿ ಸೇರಿ ಸಿಸಿ ಟಿವಿ ಡಿವಿಆರ್ ಕದ್ದೊಯ್ದಿರುವುದು
  • ಆಧುನಿಕ ಸೈರನ್ ಮತ್ತು ಕಾವಲುಗಾರ ಇಲ್ಲದಿರುವುದು
  • ಬ್ಯಾಂಕ್ ಪಕ್ಕದಲ್ಲಿ ಗಿಡಗಂಟಿ ಬೆಳೆದಿರುವುದು, ಸ್ವಚ್ಛತೆ ಇಲ್ಲದಿರುವುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net