

ಹಾಸನ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಬಂಧ ಹಾಗೂ ಸರ್ಕಾರದ ಕಠಿಣ ಕ್ರಮ ಕೈಗೊಳ್ಳುವ ಹೇಳಿಕೆ ಅಕ್ಷರಶಃ ಜಾರಿಗೆ ಬರದಿರುವುದರ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಉಂಟಾಗಿರುವ ನಡುವೆಯೇ ಇಂದು ಹಾಡಹಗಲೇ ಮಹಿಳೆಯೊಬ್ಬರ ಕೊಲೆ ನಡೆದಿದೆ.
ಹಾಸನದ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಆಭರಣ ಅಂಗಡಿಯೊಂದರ ಮಾಲೀಕ ಕುಮಾರ್ ಎಂಬವರ ಪತ್ನಿ ಮಂಜುಳಾ (41) ಕೊಲೆಯಾದ ಮಹಿಳೆ. ಇಂದು ಇವರು ಮನೆಯಲ್ಲಿ ಒಂಟಿಯಾಗಿದ್ದಾಗ ಈ ಹತ್ಯೆ ನಡೆದಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನಕ್ಕೆ ಬಂದ ವ್ಯಕ್ತಿ ಈ ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.