

ಹಿರೇಕೆರೂರ: ಬಂಗಾರದ ಅಂಗಡಿಗಳ ಶಟರ್ಸ್ ಮುರಿದು ಸುಮಾರು 1 ಕೆಜಿ ಬೆಳ್ಳಿ ಹಾಗೂ ನಗದು ದೋಚಿಕೊಂಡು ಹೋದ ಘಟನೆ ಪಟ್ಟಣದ ಸಂತೆ ಮೈದಾನಕ್ಕೆ ಹೊಂದಿಕೊಂಡ ಪಪಂ ವಾಣಿಜ್ಯ ಮಳಿಗೆಗಳಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.
ತುಕಾರಾಮ್ ರಾಯ್ಕರ್ ಅವರ ಅಂಗಡಿಯಲ್ಲಿ ಕಳ್ಳತನ ನಡೆದಿದೆ.
ಇನ್ನು ನಾಗರಾಜ ಸಾನು, ನಿತ್ಯಾನಂದ ಸಾನು ಅವರಿಗೆ ಸೇರಿದ ಅಂಗಡಿಗಳ ಬಾಗಿಲು ಮುರಿಯಲು ಕಳ್ಳರು ಯತ್ನಿಸಿದ್ದಾರೆ. ಸಂತೆ ಮೈದಾನಕ್ಕೆ ಹೊಂದಿಕೊಂಡ ಸದಾನಂದ ಅಂಗಡಿ ಅವರ ದಿನಸಿ ಅಂಗಡಿಯ ಶೆಟರ್ಸ್ ಮುರಿದಿದ್ದು, ಅಲ್ಲಿ ಹಣ ಸಿಗದೆ ನಿರಾಸೆಯಿಂದ ಮರಳಿದ್ದಾರೆ, ಈ ಕಳ್ಳತನದ ದೃಶ್ಯ ಸೆರೆಯಾಗುತ್ತಿದ್ದನ್ನು ಗಮನಿಸಿದ ಕಳ್ಳರು ನಾಗರಾಜ ಸಾನು ಅವರ ಅಂಗಡಿಯ ಮುಂಬಾಗಿಲಿನಲ್ಲಿ ಅಳವಡಿಸಿದ್ದ ಎರಡು ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿದ್ದಾರೆ. ಇದೇ ಸಿಸಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, 5 ಜನ ಕಳ್ಳರು ಇದರಲ್ಲಿ ಭಾಗಿಯಾಗಿರುವುದು ತಿಳಿದಿದೆ.
ಮುಖಕ್ಕೆ ಬಟ್ಟೆ, ಮಾಸ್ಕ್ ಧರಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಸ್ಥಳಕ್ಕೆ ಶ್ವಾನದಳ ಬಂದು ಪರಿಶೀಲನೆ ನಡೆಸಿದೆ. ಈ ಸರಣಿ ಕಳ್ಳತನದಿಂದ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದು, ಪೊಲೀಸ್ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.