

ಚಿಂತಾಮಣಿ: ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆಗಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದು, ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ಕಾರು ಸೇರಿ ಒಟ್ಟು 47.69 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಪಿ ಕುಶಾಲ್ ಚೌಕ್ಸೆ ತಿಳಿಸಿದರು.
ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಸೆ.16ರಂದು ತಾಲೂಕಿನ ಅಂಬಾಜಿದುರ್ಗ ಹೋಬಳಿಯ ನಾಯನಹಳ್ಳಿ ಗ್ರಾಮದ ಪಿ.ವಿ. ಕೃಷ್ಣಾರೆಡ್ಡಿ ಅವರ ಮನೆಯ ಬೀಗ ಒಡೆದು ಸುಮಾರು 7.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು. ಮತ್ತೊಂದು ಪ್ರಕರಣದಲ್ಲಿ ಸೆ.14ರಂದು ತಾಲೂಕಿನ ಕಸಬಾ ಹೋಬಳಿ ಕಾಗತಿ ಗ್ರಾಮದ ರಾಜಪ್ಪ ಎಂಬುವರ ಮನೆಯ ಬೀಗ ಮುರಿದು 98,400 ರೂ. ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು ಮಾಡಲಾಗಿತ್ತು. ಈ ಎರಡು ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದವು. ಪೊಲೀಸರು ಪ್ರಕರಣ ಭೇದಿಸಿದ್ದಾರೆ ಎಂದರು.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿಂದುಪುರದ ಎಂ. ಮಹೇಶ್ (25), ಬೆಂಗಳೂರಿನ ಕಾಟನ್‌ಪೇಟೆಯ ಜಾಲಿಮೊಹಲ್ಲಾ ರಸ್ತೆ ನಿವಾಸಿ, ಹಾಲಿ ಚಿಂತಾಮಣಿಯ ಗಾಂಧಿನಗರ ಬಡಾವಣೆಯ ನಿವಾಸಿ ಮುದಾಫೀರ್ (33) ಹಾಗೂ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಎ.ಡಿ. ಸುಲ್ತಾನ್ (22) ಬಂಧಿತರು.
ವಿಶೇಷ ತಂಡ
ಆರೋಪಿಗಳ ಪತ್ತೆಗಾಗಿ ಎಎಸ್‌ಪಿ ರಾಜಾ ಇಮಾಮ್ ಖಾಸಿಂ ಮತ್ತು ಡಿವೈಎಸ್‌ಪಿ ಪಿ. ಮುರಳೀಧರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್‌ಐಗಳಾದ ಎಸ್.ಶಿವರಾಜು, ಇ.ಎಂ ಮಮತಾ ಹಾಗೂ ನಾಗೇಂದ್ರ ಪ್ರಸಾದ್, ಪುನೀತ್ ನಂಜುರಾಯ್, ಎಎಸ್‌ಐ ದಿನೇಶ್ ಮತ್ತು ಸಿಬ್ಬಂದಿಗಳಾದ ವಿಶ್ವನಾಥ ಸಿದ್ದೇಶ್, ನರೇಶ್, ಕೃಷ್ಣಮೂರ್ತಿ, ಪ್ರವೀಣ್, ಚಾಲಕರಾದ ಶ್ರೀನಿವಾಸ ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ಸಿಬ್ಬಂದಿ ರವಿಕುಮಾರ್ ಮತ್ತು ಸಿ.ಮುನಿಕೃಷ್ಣ ತಂಡದಲ್ಲಿದ್ದರು. ಕಾರ್ಯಾಚರಣೆಗಿಳಿದ ತಂಡ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 40,47,725 ರೂ. ಮೌಲ್ಯದ 512.5 ಗ್ರಾಂ ಚಿನ್ನಾಭರಣ, 2,21,182 ರೂ. ಬೆಲೆ ಬಾಳುವ 2.353 ಗ್ರಾಂ ಬೆಳ್ಳಿ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂ. ಬೆಲೆ ಬಾಳುವ ಕಾರನ್ನು ವಶಪಡಿಸಿಕೊಂಡಿದೆ.
.