ಜೇವರ್ಗಿ ಪುರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆ ಮುಂದೂಡಿಕೆ

Published on

ಹೈಕೋರ್ಟ್ ತಡೆಯಾಜ್ಞೆ | ನಡೆದ ಆಯ್ಕೆ ಕೈಗೂಡದ ಜೆಡಿಎಸ್ ಕನಸು

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ಜೇವರ್ಗಿ ಪಟ್ಟಣದ ಪುರಸಭೆಯ ೧೦ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಹಠಾತ್ ಆಗಿ ಮುಂದೂಡಲಾಗಿದೆ. ಚುನಾವಣಾಧಿಕಾರಿಗಳು ಮೊದಲೇ ನಿಗಧಿಪಡಿಸಿದಂತೆ ಶುಕ್ರವಾರ ನೂತನ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆಯಬೇಕಾಗಿತ್ತು.
ಪುರಸಭೆ ಸದಸ್ಯ ಮಹ್ಮದ್ ಅಮೀರ್ ಎಂಬುವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಮತ್ತು ಕೆಲವೊಂದು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಸೂರಜ್ ಗೋವಿಂದರಾಜ ಅವರು ಸೆ.೪ವರೆಗೂ ಚುನಾವಣೆಗೆ ತಡೆಯಾಜ್ಞೆ ನೀಡಿದರು.
ಹೈಕೋರ್ಟ್ ಆದೇಶದಂತೆ ಪುರಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷ ಆಯ್ಕೆಯ ಚುನಾವಣೆಯನ್ನು ಚುನಾವಣಾಧಿಕಾರಿಗಳಾಗಿದ್ದ ಜೇವರ್ಗಿ ತಹಸೀಲ್ದಾರ ಯಲ್ಲಪ್ಪ ಯಲಗೋಡ ಮುಂದೂಡಿ ಆದೇಶಿಸಿದರು. ಅದರ ಬೆನ್ನಲ್ಲಿಯೇ ಪುರಸಭೆ ಮುಖ್ಯಾಧಿಕಾರಿಗಳು ಎಲ್ಲ ಸದಸ್ಯರಿಗೆ ಮಾಹಿತಿ ನೀಡಿ ಚುನಾವಣೆಯನ್ನು ಮುಂದೂಡಲಾಗಿತ್ತು. ಮುಂದಿನ ದಿನಾಂಕ ನಿಗದಪಡಿಸಿ ತಿಳಿಸಲಾಗುವುದು ಎಂದು ಮಾಹಿತಿ ರವಾನಿಸಿದರು.

ಇದರಿಂದಾಗಿ ಪುರಸಭೆ ಗದ್ದುಗೆ ಏರಲು ಎಲ್ಲ ತಯಾರಿ ಮಾಡಿಕೊಂಡಿದ್ದ ಜೆಡಿಸ್ ಆಸೆಗೆ ತಣ್ಣೀರು ಎರಚಿದಂತಾಗಿದೆ. ಬಿಜೆಪಿಯ ೧೧ ಸದಸ್ಯರು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಇದರಿಂದಾಗಿ ಮುಂದಿನ ದಿನಾಂಕ ನಿಗದಿಯವರೆಗೂ ಕುತೂಹಲ ಮುಂದುವರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net