

ಕುಂದಾಪುರ: ಉಡುಪಿ ಕಥೋಲಿಕ ಧರ್ಮ ಕ್ಷೇತ್ರ ಪ್ರತಿ ವರ್ಷ 10ನೇ ತರಗತಿಯ ಕಥೋಲಿಕ್ ವಿದ್ಯಾರ್ಥಿಗಳಿಗೆ ಸಂಘಟಿಸುವ ಜೀವನ್ ಜ್ಯೋತಿ ಶಿಬಿರ ಮೂರು ದಿನ ತಲ್ಲೂರಿನ ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದ ಸಭಾಂಗಣದಲ್ಲಿ ಧರ್ಮಗುರು ಎಡ್ವಿನ್ ಡಿಸೋಜಾ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.
ತ್ರಾಸಿ ಕ್ರೈಸ್ಟ್ ಕಿಂಗ್ ಚರ್ಚಿನ ಧರ್ಮಗುರು ರೋಸಾರಿಯೊ ಫರ್ನಾಂಡಿಸ್ ಶಿಬಿರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಅನುಗ್ರಹದ ಧರ್ಮಾಚರಣೆ ಆಯೋಗದ ವಿಲ್ಸನ್ ಡಿಸೋಜಾ, ಪಡುಕೋಣೆ ಸಂತ ಅಂತೋನಿ ದೇವಾಲಯದ ಧರ್ಮಗುರು ಫ್ರಾನ್ಸಿಸ್ ಕರ್ನೇಲಿಯೋ, ಗಂಗೊಳ್ಳಿ ಚರ್ಚಿನ 20 ಆಯೋಗಗಳ ಸಂಚಾಲಕಿ ರೆನಿಟಾ ಬಾರ್ನೆಸ್ ಹಾಗೂ ಬೈಂದೂರು ಹೋಲಿ ಕ್ರಾಸ್ ದೇವಾಲಯದ ಧರ್ಮಗುರು ವಿನ್ಸೆಂಟ್ ಕುವೆಲ್ಲೋ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹಾಗೂ ಸಂಸ್ಕಾರದ ಬಗ್ಗೆ ಮಾಹಿತಿ ನೀಡಿದರು.
ಎರಡನೇ ದಿನ ಬಸ್ರೂರು ಸಂತ ಫಿಲಿಪ್ ನೇರಿ ದೇವಾಲಯ ಧರ್ಮಗುರು ರೊಯ್ ಲೋಬೊ, ಎಂಸಿಸಿ ಬ್ಯಾಂಕಿನ ಉದ್ಯೋಗಿ ಎಲ್ಡ್ರಿನ್ ಡಿಸೋಜಾ, ಕುಂದಾಪುರ ಸಂತ ಜೋಸೆಫ್ ವಾಜ್ ವಲಯ ಪ್ರಧಾನ ಗುರು ಪೌಲ್ ರೇಗೊ, ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರ ಮುಖ್ಯಾಧಿಕಾರಿ ಸುನಿಲ್ ವೇಗಸ್ ನಿರ್ಬಂಧಗಳು, ನಂಬಿಕೆ, ವೈಯಕ್ತಿಕ ಪ್ರಾರ್ಥನೆ ಹಾಗೂ ಸಂತರನ್ನು ಗೌರವಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.
ಬ್ರಹ್ಮಾವರ ಕಾಪುಚಿನ್ ಗುರು ಜೋಕಿಮ್, ಬೆಳ್ವೆ ಚರ್ಚಿನ ಅನಿಲ್ ಕರ್ನೇಲಿಯೋ, ಉಡುಪಿ ಸಂಪದ ಸಂಸ್ಥೆ ನಿರ್ದೇಶಕ ರಿಜಿನಾಲ್ಡ್ ಪಿಂಟೊ ಹಾಗೂ ಜೊಸ್ವಿ ಸಿದ್ದಕಟ್ಟೆ ಅವರು ಪರಿಸರ ವಿಜ್ಞಾನ ಹಾಗೂ ಚರ್ಚ್, ನನ್ನ ಕರೆ, ಪುನರುತ್ಥಾನ, ದುಷ್ಟ ಅಸ್ತಿತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, 20 ಆಯೋಗಗಳ ಸಂಚಾಲಕಿ, ಕ್ರೈಸ್ತ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು. ಕುಂದಾಪುರ ವಲಯದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು.