

ಪಾಂಡವಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 9 ಅಭ್ಯರ್ಥಿಗಳು ಚುನಾಯಿತರಾಗುವ ಮೂಲಕ ಸಂಘದ ಆಡಳಿತವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಒಟ್ಟು 12 ನಿರ್ದೇಶಕರ ಬಲ ಹೊಂದಿರುವ ಸಂಘದ ಐದು ವರ್ಷದ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಸೆ.30 ರಂದು ಚುನಾವಣೆ ನಿಗದಿಯಾಗಿತ್ತು. ಜೆಡಿಎಸ್, ರೈತಸಂಘ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎ ವರ್ಗದ 4 ಹಾಗೂ ಬಿ ವರ್ಗದ 8 ಸ್ಥಾನಗಳು ಸೇರಿದಂತೆ ಎಲ್ಲ 12 ಸ್ಥಾನಗಳಲ್ಲೂ ಸ್ಪರ್ಧಿಸಿದ್ದರು. ಜೆಡಿಎಸ್‌ನೊಂದಗಿನ ಮೈತ್ರಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತರು ಬಿ ವರ್ಗದ 8 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಜೆಡಿಎಸ್ ಬೆಂಬಲಿತ-9 ಹಾಗೂ ಕಾಂಗ್ರೆಸ್-ರೈತಸಂಘ ಬೆಂಬಲಿತ 3 ಅಭ್ಯರ್ಥಿಗಳು ಚುನಾಯಿತರಾಗಿದ್ದು, ಬಿಜೆಪಿ ಒಂದು ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
ಬಿ ವರ್ಗದ ವಿಜೇತರ ವಿವರ: ಜೆಡಿಎಸ್ ಬೆಂಬಲಿತರಾದ ಪಿ.ಎಲ್.ಆದರ್ಶ-2175 (ಸಾಮಾನ್ಯ ಕ್ಷೇತ್ರ), ಚಿಕ್ಕಾಡೆ ಗಿರೀಶ್-20613 (ಹಿಂದುಳಿದ ವರ್ಗ ಬಿ) ಎ.ಕೃಷ್ಣ-1762 (ಹಿಂದುಳಿದ ವರ್ಗ ಎ ಕ್ಷೇತ್ರ), ಪ್ರೇಮಾ ಪುಟ್ಟೇಗೌಡ-1746 (ಸಾಮಾನ್ಯ ಮಹಿಳೆ), ನರಸಿಂಹನಾಯ್ಕ-1363 (ಪರಿಶಿಷ್ಟ ಪಂಗಡ) ಗೆಲುವು ಸಾಧಿಸಿದರೆ, ರೈತಸಂಘ ಮತ್ತು ಕಾಂಗ್ರೆಸ್ ಬೆಂಬಲಿತರಾದ ಎಚ್.ಎನ್.ಚಿಟ್ಟಿಬಾಬು-1914 (ಸಾಮಾನ್ಯ), ಸುನಂದಮ್ಮ-1431 (ಮಹಿಳಾ ಮೀಸಲು) ಹಾಗೂ ಹಾಳಯ್ಯ-1500 ( ಪರಿಶಿಷ್ಟ ಜಾತಿ) ಗೆಲವು ಸಾಧಿಸಿದ್ದಾರೆ.
ಎ ವರ್ಗದ ಎಲ್ಲ ನಾಲ್ಕು ಕ್ಷೇತ್ರದಲ್ಲೂ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಸಿ.ಎಂ.ಕಿರಣ್ ಕುಮಾರ್- 18, ಸಿ.ಎಸ್.ಗೋಪಾಲಗೌಡ-17, ವಡ್ಡರಹಳ್ಳಿ ವಿ.ಎಸ್.ನಿಂಗೇಗೌಡ-17(ಜೆಡಿಎಸ್) ಎಂ.ಸ್ವಾಮಿ-17(ಜೆಡಿಎಸ್) ಗೆಲುವು ಸಾಧಿಸಿದ್ದಾರೆ.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂಧಿಸಿದರು. ಬಳಿಕ ಮಾತನಾಡಿ, ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕ್ಷೇತ್ರದ ಷೇರುದಾರ ಮತದಾರರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಧಿಕ ಮತಗಳನ್ನು ನೀಡುವ ಮೂಲಕ ಗೆಲ್ಲಿಸಿ ಸಂಘದ ಅಧಿಕಾರ ಚುಕ್ಕಾಣೆ ಹಿಡಿಯಲು ಸಹಕಾರ ನೀಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆಯ್ಕೆಯಾದ ಎಲ್ಲ ನಿರ್ದೇಶಕರು ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಮುಖಂಡರಾದ ಎಸ್.ಎ.ಮಲ್ಲೇಶ್, ಸಿ.ಎ.ಲೋಕೇಶ್, ಚಿಕ್ಕಾಡೆ ವಿಜಯೇಂದ್ರ, ಕನಗನಮರಡಿ ನಾಗರಾಜು, ಮೈಕ್ ಮಹದೇವು, ಪ್ರಕಾಶ್ ಇತರರಿದ್ದರು.