

ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಹಾಸನಾಂಬ ದೇವಾಲಯಕ್ಕೆ ಬಂದಾಗ ಜಿಲ್ಲಾಡಳಿತದಿಂದ ಗೌರವಿಸಿಲ್ಲ ಹಾಗೂ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಹಾಸನಾಂಬ ದೇವಾಲಯ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸಚಿವರು ಬಂದಾಗ ಜಿಲ್ಲಾಧಿಕಾರಿ, ಎಸ್ಪಿ, ದೇವಾಲಯ ಆಡಳಿತಾಧಿಕಾರಿ ಸರದಿ ಸಾಲಿನಲ್ಲಿ ನಿಂತು ದೇವಾಲಯ ದರ್ಶನ ವಾಗುವವರೆಗೆ ಜತೆಗಿದ್ದು, ಜಿಲ್ಲಾಡಳಿತದಿಂದ ಸನ್ಮಾನಿಸಿ ಗೌರವಿಸಲಾಗುತ್ತಿತ್ತು. ಆದರೆ, ಕೇಂದ್ರ ಮಂತ್ರಿಗಳು ದೇವಾಲಯಕ್ಕೆ ಆಗಮಿಸಿದ್ದಾಗ ಜಿಲ್ಲಾಮಟ್ಟದ ಕನಿಷ್ಠ ಒಬ್ಬ ಅಧಿಕಾರಿ ಕೂಡ ಅತ್ತ ಸುಳಿಯಲಿಲ್ಲ ಎಂದು ಆರೋಪಿಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ಗ್ರಾಮ ದೇವತೆಯನ್ನು ವ್ಯಾಪಾರಕ್ಕಿಟ್ಟ ಜಿಲ್ಲಾಡಳಿತಕ್ಕೆ ಧಿಕ್ಕಾರ, ಕಾಂಗ್ರೆಸ್ ಏಜೆಂಟ್ ಡಿಸಿಗೆ ಧಿಕ್ಕಾರ, ನಮ್ಮದು-ನಮ್ಮದು ಹಾಸನಾಂಬೆ ನಮ್ಮದು, ಹಾಸನಾಂಬೆ ಉತ್ಸವವನ್ನು ಕಾಂಗ್ರೆಸ್ ಉತ್ಸವ ಮಾಡುತ್ತಿರುವ ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂದು ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಪಿ ಮೊಹಮ್ಮದ್ ಸುಜಿತಾ, ದೇವಾಲಯ ಆಡಳಿತಾಧಿಕಾರಿ ಮಾರುತಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನಮಾಡಿದರು. ಪ್ರತಿಭಟನಾ ನಿರತರು ಡಿಸಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಜಿಲ್ಲಾಡಳಿತದಿಂದ ಕೇಂದ್ರ ಮಂತ್ರಿಗೆ ಯಾಕೆ ಗೌರವ ನೀಡಲಿಲ್ಲ ಎಂದು ಬಹಿರಂಗ ಪಡಿಸಬೇಕು. ಹಾಸನಾಂಬ ದೇವಾಲಯ ಜೀರ್ಣೋದ್ಧಾರ ಆಗಲು ಕುಮಾರಸ್ವಾಮಿ ಅವರ ಕೊಡುಗೆ ಅಪಾರ ಇದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 2 ಕೋಟಿ ಅನುದಾನ ನೀಡಿದ್ದಾರೆ. ಸೌಜನ್ಯಕ್ಕೆ ಕೂಡ ಡಿಸಿ, ಎಸ್ಪಿ ಗೌರವಿಸಿಲ್ಲ. ಉಸ್ತುವಾರಿ ಸಚಿವ ಹಾಗೂ ಡಿಸಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದರು.
ವಿಜ್ಞಾನ ಕಾಲೇಜಿನ ಟರ್ಫ್ ಮೈದಾನದಲ್ಲಿ ಆಹಾರ ಮೇಳ ಮಾಡುವ ಮೂಲಕ ಮೈದಾನ ಹಾಳು ಮಾಡಲಾಗಿದೆ. ಸೌಜನ್ಯಕ್ಕೆ ಕೂಡ ಸ್ಥಳೀಯ ಶಾಸಕರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನನ್ನ ಅಧ್ಯಕ್ಷತೆ ಇದ್ದರೂ ಕೂಡ ಆಹ್ವಾನಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ವೇದಿಕೆ ಕಲ್ಪಿಸಲಾಗಿದೆ ಜಿಲ್ಲಾಧಿಕಾರಿ ಬಹಿರಂಗ ಕ್ಷಮೆ ಕೇಳಬೇಕು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಂತ್ರಿಗಳು ದೇಗುಲಕ್ಕೆ ಆಗಮಿಸಿದಾಗ ಜಿಲ್ಲಾಡಳಿತದಿಂದ ಗೌರವಿಸಿಲ್ಲ. ಕುಮಾರಸ್ವಾಮಿ ಅವರು ದೇವಾಲಯ ಜೀರ್ಣೋದ್ಧಾರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತಹ ಘಟನೆಗಳು ಮಾಮೂಲಾಗಿರುತ್ತವೆ. ಎಸಿಯನ್ನು ಮುಂದಿಟ್ಟುಕೊಂಡು ದೇವಾಲಯದ ಹಣವನ್ನು ದುಂದುವೆಚ್ಚದ ಮೂಲಕ ಲೂಟಿ ಮಾಡುತ್ತಿದ್ದಾರೆ. ಎಲ್ಲದರ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೊರಬೇಕು. ಸರ್ಕಾರದ ಅಣತಿಯಲ್ಲಿ ಜಿಲ್ಲಾಧಿಕಾರಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸಚಿವರಿಗೆ ಅಗೌರವ ತೋರುವುದರ ಹಿಂದೆ ರಾಜಕೀಯ ಇದೆ. ಉಸ್ತುವಾರಿ ಸಚಿವರು ಮೈಕ್ ಹಿಡಿದು ಅನೌನ್ಸ್ ಮಾಡುತ್ತಾರೆಂದರೆ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದರ್ಥ. ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವುದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಡುವೆ ಸಮನ್ವಯ ಇಲ್ಲ ಎಂದು ಗೊತ್ತಾಗುತ್ತದೆ ಎಂದರು.
ಹಾಸನಾಂಬೆ ದೇವರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ. ಜೆಡಿಎಸ್ ಸರ್ಕಾರ ಹಣ ಬಿಡುಗಡೆ ಮಾಡಿ ದೇವಾಲಯ ಅಭಿವೃದ್ಧಿ ಮಾಡಿದೆ. ಕಾಂಗ್ರೆಸ್‌ನ ಕೊಡುಗೆ ಏನು ಎಂಬುದನ್ನು ಉಸ್ತುವಾರಿ ಸಚಿವರು ಬಹಿರಂಗಪಡಿಸಬೇಕು. ಡಿಸಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದರು. ಜೆಡಿಎಸ್ ಮುಖಂಡ ದ್ಯಾವೇಗೌಡ, ಮೇಯರ್ ಗಿರೀಶ್ ಚನ್ನವೀರಪ್ಪ ಇತರರಿದ್ದರು.
ಡಿಸಿ ಬರುತ್ತಿದ್ದಂತೆ ತಣ್ಣಗಾದ ಪ್ರತಿಭಟನೆ
ಪ್ರತಿಭಟನೆ ನಿರತರು ಡಿಸಿ ಸ್ಥಳಕ್ಕೆ ಬರುವಂತೆ ಪಟ್ಟು ಬಿಡದೆ ರಸ್ತೆಯಲ್ಲಿ ಪೆಂಡಾಲ್ ಹಾಕಿ ಕುಳಿತುಕೊಂಡರು. ಡಿಸಿ ಸ್ಥಳಕ್ಕೆ ಬಂದು ಉತ್ತರ ನೀಡುವವರೆಗೆ ಕದಲುವುದಿಲ್ಲ ಎಂದು ಜೆಡಿಎಸ್ ಶಾಸಕರು ಹಾಗೂ ಕಾರ್ಯಕರ್ತರು ಪಟ್ಟು ಹಿಡಿದರು.
ಡಿಸಿ ಸ್ಥಳಕ್ಕೆ ಬರುತ್ತಲೇ ಆಕ್ರೋಶದಲ್ಲಿದ್ದ ಪ್ರತಿಭಟನಾ ನಿರತರು ತಣ್ಣಗಾದರು. ಶಾಸಕ ಎ.ಮಂಜು ನೀವು ವ್ಯವಸ್ಥೆ ಚೆನ್ನಾಗಿ ಮಾಡಿದ್ದೀರಿ. ನಮ್ಮ ನಾಯಕರಿಗೆ ಅಗೌರವ ಆಯ್ತು ಎನ್ನುವುದು ನಮ್ಮ ನೋವು ಎಂದು ಹೇಳಿದರು. ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ ಎಂದು ಡಿಸಿ ಲತಾಕುಮಾರಿ ತಮ್ಮ ನಿಲುವು ಸಮರ್ಥಿಸಿಕೊಂಡರು. ಕೊನೆಗೆ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ದೂರವಾಣಿ ಮೂಲಕ ಡಿಸಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಸಮಜಾಯಿಷಿ ನೀಡಿದರು. ನಂತರ ಪ್ರಸಾದ ಕೌಂಟರ್‌ನಿಂದ ಪ್ರಸಾದ ತರಿಸಿ ಪ್ರತಿಭಟನಾ ನಿರತರಿಗೆ ಡಿಸಿ ನೀಡಿದರು. ಡಿಸಿ ಕ್ಷಮೆ ಕೇಳುವವರೆಗೆ ಇಲ್ಲಿಂದ ಹೊಗಲ್ಲ ಎಂದು ಎಚ್ಚರಿಕೆ ನೀಡಿದ್ದ ಶಾಸಕರು ಡಿಸಿ ಸ್ಥಳಕ್ಕೆ ಬರುತ್ತಲೆ ಡಿಸಿ ಹಾಡಿ, ಹೊಗಳಿ ಮೌನವಾದರು.