ಇನ್ನೂ ಕೇಡರ್​ ಬೇಸ್​ ಪಕ್ಷ ಜೆಡಿಎಸ್​

jds1
Published on

ತುಮಕೂರು: ರಾಜ್ಯದಲ್ಲಿ ನಾಯಕರ ಆಧಾರಿತ (ಲೀಡರ್​ ಬೇಸ್​) ಜೆಡಿಎಸ್​ ಪಕ್ಷವನ್ನು ಕಾರ್ಯಕರ್ತರ ಆಧಾರಿತ (ಕೇಡರ್​ ಬೇಸ್​) ಪಕ್ಷವನ್ನಾಗಿ ಪರಿವರ್ತಿಸಲಾಗುವುದು ಎಂದು ರಾಜ್ಯ ಜೆಡಿಎಸ್​ ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದರು.

ನಗರದ ಕೊಲ್ಹಾಪುರದಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಜೆಡಿಎಸ್​ ಜಿಲ್ಲಾ ಘಟಕದವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಮತ್ತು ಬೂತ್​ ಸಮಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷವನ್ನು ಬೇರು ಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಇಂದೊಂದು ಮಹತ್ವದ ನಿರ್ಧಾರವಾಗಿದೆ. ಪಕ್ಷಕ್ಕೆ ಕಾರ್ಯಕರ್ತರೇ ಎಲ್ಲಾ ಎಂದರು.

1993ರಲ್ಲಿ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಎಚ್​.ಡಿ.ದೇವೇಗೌಡರ ಕನಸನ್ನು ಈಗ ಕೇಂದ್ರ ಮಂತ್ರಿಯಾಗಿರುವ ಎಚ್​.ಡಿ.ಕುಮಾರಸ್ವಾಮಿ ಅವರು ನನಸು ಮಾಡಿದ್ದಾರೆ. ಲೀಡರ್​ ಬೇಸ್​ ಪಾರ್ಟಿಯನ್ನು ಕೇಡರ್​ ಬೇಸ್​ ಪಾರ್ಟಿಯನ್ನಾಗಿ ಮಾಡಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ವಿವಿಧ ಟಕಗಳಲ್ಲಿ ಸಕ್ರಿಯವಾಗಿ ದುಡಿಯುವ ಕಾರ್ಯಕರ್ತರನ್ನು ಪಕ್ಷದೊಳಗೆ ಗುರುತಿಸಿ, ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಸದಸ್ಯತ್ವ ನೋಂದಣಿ ಮತ್ತು ಬೂತ್​ ಕಮಿಟಿಗಳ ನೇಮಕದಲ್ಲಿ ತೊಡಗಿ, ಪಕ್ಷವನ್ನು ಬಲಪಡಿಸುವಂತೆ ಮನವಿ ಮಾಡಿದರು.

ಸಂಸದರಾದ ಎಚ್​.ಡಿ.ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾದ ನಂತರ ಜೆಡಿಎಸ್​ ಕಾರ್ಯಕರ್ತ ರಲ್ಲಿ ಹೊಸ ಹುರುಪು, ಉತ್ಸಾಹ ಕಾಣುತ್ತಿದೆ. ಇದೇ ಹುಮ್ಮಸ್ಸು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರ ಸ್ಥಳಿಯ ಸಂಸ್ಥೆ ಚುನಾವಣೆಗಳಲ್ಲಿ ತೋರಿಸಿದರೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಬಿಜೆಪಿ-&ಜೆಡಿಎಸ್​ ಚುನಾವಣಾ ಹೊಂದಾಣಿಕೆಯು ಉಭಯ ಪಕ್ಷಗಳ ಮುಖಂಡರು ನಿರ್ಧಾರವಾಗಿರಲಿದೆ. ಪಕ್ಷ ಸಂಘಟನೆ ನಮ್ಮ ಪಕ್ಷದ ಅಂತರಿಕ ವಿಚಾರವಾಗಿದೆ. ಈಗಾಗಲೇ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಹ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಹಾಗೆಯೇ ಜೆಡಿಎಸ್​ ಕೂಡ ಸಂಘಟನೆಗೆ ಮುನ್ನುಡಿ ಬರೆದಿದ್ದು, ಇಂದಿನಿಂದಲೇ ಪಕ್ಷದ ಕಾರ್ಯಕರ್ತರು ಕೆಲಸ ಆರಂಭಿಸುವಂತೆ ನಿಖಿಲ್​ ಕರೆಯಿತ್ತರು.

ಜೆಡಿಎಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್​.ಡಿ.ಕುಮಾರಸ್ವಾಮಿ ಅವರ ನಿರ್ದೇಶನದಂತೆ ಜೆಡಿಎಸ್​ ಸದಸ್ಯತ್ವ ನೊಂದಣಿ ಮತ್ತು ಬೂತ್​ ಸಮಿತಿಗಳ ಸದಸ್ಯರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹಿರಿಯರ ಜತೆಗೆ ಸೇರಿ ಯುವ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಿದೆ. ಎಲ್ಲಾ ಜಾತಿ, ಜನಾಂಗಗಳನ್ನು ಒಳಗೊಂಡಂತೆ ಒಂದು ಬೂತ್​ಗೆ 25 ಜನ ಸದಸ್ಯರನ್ನು ನೇಮಿಸಿ, ಅವರ ಪಟ್ಟಿಯನ್ನು ಮುಂದಿನ ಎಂಟು ವಾರಗಳಲ್ಲಿ ಪಕ್ಷದ ಕಚೇರಿಗೆ ತಲುಪಿಸುವ ಜವಾಬ್ದಾರಿ ಆಯಾಯ ಜಿಲ್ಲಾಧ್ಯಕ್ಷರೊಂದಿಗೆ ಹಾಲಿ ಮತ್ತು ಮಾಜಿ ಶಾಸಕರದ್ದಾಗಿದೆ ಎಂದು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶಬಾಬು ಹೇಳಿದರು.

ಮಾಜಿ ಶಾಸಕ ಎಚ್​.ಎಸ್​.ಶಿವಶಂಕರ್​, ವಿಧಾನಪರಿಷತ್​ ಸದಸ್ಯ ವಿವೇಕಾನಂದ, ಮಾಜಿ ಸಚಿವ ಡಿ.ನಾಗರಾಜಯ್ಯ ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಪಿ.ಆರ್​.ಸುಧಾಕರಲಾಲ್​,ಕೆ.ಎಂ.ತಿಮ್ಮರಾಯಪ್ಪ, ಎಚ್​.ನಿಂಗಪ್ಪ, ಮಂಜಣ್ಣ, ಮುಖಂಡರಾದ ಕೆ.ಟಿ.ಶಾಂತಕುಮಾರ್​,ನಾಗರಾಜು, ಉಗ್ರೇಶ್​, ಎಸ್​.ಆರ್​.ಗೌಡ, ಜಿಲ್ಲಾಧ್ಯಕ್ಷ ಆರ್​.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್​.ನಾಗರಾಜು, ಕುಂಭಯ್ಯ,ವಿಜಯಗೌಡ, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿರುವ ಕಾಂಗ್ರೆಸ್​ ನೇತೃತ್ವದ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಅದ್ವಾನಗಳನ್ನು ಸೃಷ್ಟಿ ಮಾಡಿದೆ. ಹಣಕಾಸ ಸ್ಥಿತಿಯನ್ನು ಸರಿದೂಗಿಸಲಾಗದೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನಿಯಮ ಮೀರಿ ಬಳಕೆ ಮಾಡಿಕೊಂಡಿದೆ. ಇಂತಹ ಸರ್ಕಾರ ತೊಲಗಿ, ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರ ಬರಬೇಕೆಂದರೆ ನೀವುಗಳ ಇಂದಿನಿಂದಲೇ ತಯಾರಿ ನಡೆಸಬೇಕು. ಸ್ಥಳಿಯವಾಗಿ ಬಲಾಢ್ಯರಾದರೆ ಹೆಚ್ಚು ಶಾಸಕ ಸ್ಥಾನಗಳನ್ನು ಗೆಲ್ಲಲು ಸಾಧ್ಯ. ಸಿ.ಬಿ.ಸುರೇಶ್​ಬಾಬು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net