ಅಪಘಾತದಲ್ಲಿ ಜೆಡಿಎಸ್ ಮುಖಂಡನ ಪುತ್ರ ಸಾವು

cf5c2ee6-a895-4fd0-a7ff-335210ee9a53
Published on

ರಾಮನಗರ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಜೆಡಿಎಸ್ ಮುಖಂಡನ ಪುತ್ರನೊಬ್ಬ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ನಗರದ ಹೊರವಲಯದ ನೇಟಸ್ ಶಾಲೆ ಬಳಿಯ ಹೆದ್ದಾರಿಯ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಅಭಿಷೇಕ್ ಡಿ. ಗೌಡ (29) ಎಂಬುವರು ಮೃತಪಟ್ಟಿದ್ದಾರೆ.

ಅಭಿಷೇಕ್‌ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಜೆಡಿಎಸ್ ಮುಖಂಡ ದಾಸೇಗೌಡ ಅವರ ಪುತ್ರನಾಗಿದ್ದು, ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮಂಡ್ಯದಿಂದ ಬೆಂಗಳೂರು ಕಡೆಗೆ ಕಾರಿನಲ್ಲಿ ವೇಗವಾಗಿ ಹೋಗುತ್ತಿದ್ದ ಅವರು ಮೇಲ್ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡು ವಿಭಜಕಕ್ಕೆ ಗುದ್ದಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ವಿಭಜಕ ದಾಟಿ ಮೇಲ್ಸೇತುವೆ ನಡುವಣ ಜಾಗದಿಂದ ಕೆಳಕ್ಕೆ ಬಿದ್ದು ಪಲ್ಟಿಯಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅಭಿಷೇಕ್ ಅವರನ್ನು ರಾಮನಗರದ ರಾಮಕೃಷ್ಣ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ದೇಹದ ವಿವಿಧ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಬದುಕುಳಿಯಲಿಲ್ಲ. ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net