

ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಕೈಹಿಡಿಯಲಿದ್ದು, 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಬಾಗಲಗುಂಟೆ, ಮಲ್ಲಸಂದ್ರದಲ್ಲಿ ರಸ್ತೆಯಾತ್ರೆ ಮೂಲಕ ಮತಯಾಚನೆ ಮಾಡಿ ಮಾತನಾಡಿದರು. ಜನತೆಯ ಒಲವು ನನ್ನ ಮೇಲಿರುವುದರಿಂದ ಜೆಡಿಎಸ್ ಕ್ಷೇತ್ರದಲ್ಲಿ ಗೆಲುವಿನ ರಣಭೇರಿ ಬಾರಿಸುವುದು ನಿಶ್ಚಿತ ಎಂದರು.
ಕ್ಷೇತ್ರದೆಲ್ಲೆಡೆ ಮತದಾರರು ಸ್ವಯಂಪ್ರೇರಿತರಾಗಿ 'ಮನೆ-ಮನೆಗೆ ಮಂಜಣ್ಣ' ಎಂಬ ಘೋಷಣೆ ಮೊಳಗಿಸಿ ಬೆಂಬಲ ವ್ಯಕ್ತಪಡಿಸಿದರು. ರ್ಯಾಲಿ ಸಂದರ್ಭದಲ್ಲಿ ನಾಗರಿಕರು ಮಂಜುನಾಥ್ ಅವರತ್ತ ಕೈಬೀಸಿ ಶುಭ ಕೋರಿದರು. ಬೃಹತ್ ಹೂಹಾರ ಹಾಕುವ ಮೂಲಕ ಹರಸಿದರು.
ರಾಜ್ಯದಲ್ಲಿ ಜೆಡಿಎಸ್ ಪರ ವಾತಾವರಣ ಇರುವುದರಿಂದ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಶತಸಿದ್ಧ ಎಂದು ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದೆಯೂ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಜನತೆಗೆ ಆಶ್ವಾಸನೆ ನೀಡಿದರು. ವಾರ್ಡ್ ಜೆಡಿಎಸ್ ಸದಸ್ಯ ರುದ್ರೇಗೌಡ, ಮುಖಂಡ ಸಿ.ಜೆ. ರಮೇಶ್, ಸಾವಿರಾರು ಕಾರ್ಯಕರ್ತರುಗಳು ಉಪಸ್ಥಿತರಿದ್ದರು.