ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಜೆಡಿಎಸ್ ಸಿದ್ಧತೆ

mandya
Published on

ಮಂಡ್ಯ: ರಾಜ್ಯಸಭಾ ಚುನಾವಣೆ ವಿಚಾರದಲ್ಲಿ ಪಕ್ಷೇತರ ಶಾಸಕರಿಗೆ ಜೆಡಿಎಸ್ ನಾಯಕರಿಂದ ಬೆದರಿಕೆಯಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ.

ಜಿಲ್ಲೆಯ ಕೆ‌.ಆರ್‌.ಪೇಟೆಯಲ್ಲಿ ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಈ ಕುರಿತು ಮಾಹಿತಿ ನೀಡಿದ್ದು, ಕೋಟ್ಯಂತರ ರೂ. ಮಾನಹಾನಿಯ ಕೇಸ್ ದಾಖಲಿಸುವುದಾಗಿ ಹೇಳಿಕೆ ನೀಡಿದ್ದಾರೆ.

ಶಾಸಕ ರವಿಕುಮಾರ್ ಅವರ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ ಅವರು, ಮಂಡ್ಯ ಶಾಸಕರಿಗೆ ಶಾಸಕ ಸ್ಥಾನ ಸಿಕ್ಕಿರೋದು ಪೂರ್ವ ಜನ್ಮದ ಪುಣ್ಯ. ಅದನ್ನ ಹೆಂಗೆ ಉಳಿಸಿಕೊಂಡು ಕೆಲಸ ಮಾಡಬೇಕು ಎಂಬುದನ್ನ ಕಲಿಯಲಿ. ಈ ತರಹದ ಲಘುವಾದ ಮಾತುಗಳು ಆರೋಪಗಳನ್ನು ಮಾಡುವುದನ್ನ ಬಿಡಲಿ ಎಂದರು.

ಇಂತಹ ವೈಜ್ಞಾನಿಕ ಜಗತ್ತಿನಲ್ಲಿ ಎಲ್ಲದಕ್ಕೂ ಸಾಕ್ಷಿ ಇರಬೇಕಲ್ಲ. ಈ ಆರೋಪ ಮಾಡಿರುವುಕ್ಕೆ ಅವರ ವಿರುದ್ಧ ಎಷ್ಟು ಕೋಟಿ ರೂ.ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎನ್ನುವುದನ್ನು ತೋರಿಸುತ್ತೇವೆ. ಇನ್ನೆರಡು ದಿನದಲ್ಲಿ ಶಾಸಕರ ವಿರುದ್ದ ಕೇಸ್ ದಾಖಲಿಸಲಾಗುವುದು ಎಂದು ಪುಟ್ಟರಾಜು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net