

ಬೆಂಗಳೂರು: ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವೀಕೃತ ತುರ್ತು ನಿಗಾ ಘಟಕ ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಸೇರಿ ಎಲ್ಲ ಸಂದರ್ಭಗಳಲ್ಲೂ ಆಸ್ಪತ್ರೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸುತ್ತ ಬಂದಿದೆ. ಆಸ್ಪತ್ರೆಯ ಆಡಳಿತ ವಿಚಾರಗಳಲ್ಲಿ ಇದ್ದ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅದನ್ನು ಖುದ್ದು ಪರಿಹರಿಸಿದ್ದಾಗಿ ಹೇಳಿದರು.
ಆಸ್ಪತ್ರೆಯಲ್ಲಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಿಂದ ಕೆನರಾ ಬ್ಯಾಂಕ್ ಸಹಕಾರದೊಂದಿಗೆ 4 ಕೋಟಿ ರೂ. ವೆಚ್ಚದಲ್ಲಿ ತುರ್ತು ನಿಗಾ ಘಟಕವನ್ನು ನವೀಕರಿಸಲಾಗಿದೆ. 20 ಹಾಸಿಗೆಗಳ ಘಟಕದಿಂದ ತುರ್ತು ಪರಿಸ್ಥಿತಿಯಲ್ಲಿ ದಾಖಲಾತಿ ಸಮಸ್ಯೆ ಇಲ್ಲದೆ ಚಿಕಿತ್ಸೆ ಒದಗಿಸಬಹುದಾಗಿದೆ ಎಂದರು.
ಆಸ್ಪತ್ರೆಯ ತುರ್ತು ನಿಗಾ ಘಟಕ ನವೀಕರಣಕ್ಕೆ ಸಹಕಾರ ನೀಡಿದ ಕೆನರಾ ಬ್ಯಾಂಕ್ ಕಾರ್ಯವನ್ನು ಶ್ಲಾಸಿದ ಸಚಿವರು, ಆರೋಗ್ಯ ಕ್ಷೇತ್ರದಲ್ಲಿ ಇಂತಹ ನೆರವು ಒದಿಗಿಸಲು ದಾನಿಗಳು ಮುಂದೆ ಬರಬೇಕು. ಸಿಎಸ್‌ಆರ್ ನಿಧಿ ಅಡಿಯಲ್ಲಿ ಖಾಸಗಿ ಕಂಪನಿಗಳು ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಲು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಂಸದ ತೇಸಜ್ವಿ ಸೂರ್ಯ, ಶಾಸಕ ಸಿ.ಕೆ. ರಾಮಮೂರ್ತಿ, ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.