

ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಟ್ರಾನ್ಸ್ ಎಎಕ್ಸ್ ಶೃಂಗವು ಯಶಸ್ವಿಯಾಗಿ ನಡೆದಿದ್ದು, ಹೃದಯ ಶಸ್ತ್ರಚಿಕಿತ್ಸೆಗೆ ಟ್ರಾನ್ಸ್ ಆಕ್ಸಿಲರಿ ವಿಧಾನದ ಅಳವಡಿಕೆಯ ಮಹತ್ವದ ಬಗ್ಗೆ ಪರಾಮರ್ಶಿಸಲಾಯಿತು.
ಕನಿಷ್ಠ ಗಾಯದ ಮೂಲಕ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ವಿಧಾನದ ಬಗ್ಗೆ ಶೃಂಗದಲ್ಲಿ ವಿವರಿಸಲಾಯಿತು. 350ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು, ನೂರಕ್ಕೂ ಅಧಿಕ ಮಂದಿ ಆನ್‌ಲೈನ್ ವೇದಿಕೆ ನೆರವಿನಿಂದ ಭಾಗವಹಿಸಿದ್ದರು.
ಟ್ರಾನ್ಸ್ ಆಕ್ಸಿಲರಿ ವಿಧಾನದಲ್ಲಿ ಕಂಕುಳಿನ ಪ್ರದೇಶದ ಮೂಲಕ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಎದೆಯ ಮಧ್ಯ ಭಾಗದಲ್ಲಿರುವ ಎಲುಬನ್ನು ಕತ್ತರಿಸದೆ ಶಸ್ತ್ರಚಿಕಿತ್ಸೆ ನಡೆಸಲು ಈ ವಿಧಾನದಿಂದ ಸಾಧ್ಯ ಎಂಬ ಬಗ್ಗೆ ಸಂಸ್ಥೆಯ ವೈದ್ಯಕೀಯ ತಜ್ಞರು ಶೃಂಗದಲ್ಲಿ ಮಾಹಿತಿ ನೀಡಿದರು.
ಈ ವಿಧಾನದ ಶಸ್ತ್ರಚಿಕಿತ್ಸೆಯಲ್ಲಿ ವ್ಯಕ್ತಿ ತ್ವರಿತವಾಗಿ ಚೇತರಿಸಿಕೊಳ್ಳುತ್ತಾನೆ. ನೋವು ಕೂಡ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ ಸಂಸ್ಥೆಯ ಡಾ. ರಾಜೇಶ್ ಕಿಶನ್ ರಾವ್, ಸಂಸ್ಥೆಯಲ್ಲಿ ಟ್ರಾನ್ಸ್ ಆಕ್ಸಿಲರಿ ವಿಧಾನದಲ್ಲಿ ನಡೆಸಲಾದ 500ಕ್ಕೂ ಅಧಿಕ ಶಸ್ತ್ರಚಿಕಿತ್ಸೆಯ ಅನುಭವ ಹಂಚಿಕೊಂಡರು.
ಸಂಸ್ಥೆಯ ನಿರ್ದೇಶಕ ಪ್ರೊ.ಕೆ.ಎಸ್. ರವೀಂದ್ರನಾಥ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಇಲಾಖೆ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್, ಶೃಂಗದ ಸಂಘಟನಾ ಕಾರ್ಯದರ್ಶಿ ಡಾ. ಶಿಲ್ಪಾ ಸುರೇಶ್ ಪಾಲ್ಗೊಂಡಿದ್ದರು.