ಜನೌಷಧ ಕೇಂದ್ರಗಳನ್ನು ಮುಚ್ಚಿಸುತ್ತಿಲ್ಲ - ಆರೋಗ್ಯ ಸಚಿವರಿಂದ ಕೇಂದ್ರಕ್ಕೆ ಪತ್ರ

Dinesh Gundurao
Published on

ಬೆಂಗಳೂರು: ರಾಜ್ಯದಲ್ಲಿ 1,417 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ 184 ಕೇಂದ್ರಗಳನ್ನ ಮಾತ್ರ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

ಈ ವಿಚಾರವಾಗಿ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಗಳ ನಿರಾಕರಣೆ ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ಅಧಿಕ ಜನೌಷಧ ಕೇಂದ್ರಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಔಷಧಗಳನ್ನು ಖರೀದಿಸಲು ರೋಗಿಗಳು ಭರಿಸುವ ವೆಚ್ಚ ತಗ್ಗಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಪಡೆಯುವ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ. ಸರ್ಕಾರಿ ಆಸ್ಪತ್ರೆಗಳ ಆವರಣಗಳ ಹೊರಗಿರುವ ಜನೌಷಧ ಕೇಂದ್ರಗಳನ್ನು ನಿರ್ಬಂಧಿಸುತ್ತಿಲ್ಲ. ಜನರು ತಮ್ಮ ಆಯ್ಕೆಯಂತೆ ಈ ಕೇಂದ್ರಗಳಿಗೆ ಭೇಟಿ ನೀಡಿ, ಔಷಧ ಪಡೆಯಲು ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟಪಡಿಸಿರುವ ಸಚಿವರು, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮೂಲಕ ಎಲ್ಲ ಅಗತ್ಯ ಔಷಧಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ನಿಯಮಿತವಾಗಿ ಪೂರೈಸಲಾಗುತ್ತಿದೆ. ಆಸ್ಪತ್ರೆಗಳಿಗೆ ಸಾಕಷ್ಟು ಅನುದಾನವನ್ನೂ ಒದಗಿಸಲಾಗಿದ್ದು, ಯಾವುದೇ ಔಷಧಗಳ ಕೊರತೆ ಉಂಟಾದಲ್ಲಿ ಸ್ಥಳೀಯವಾಗಿ ಔಷಧಗಳನ್ನು ಖರೀದಿಸಲು ಸೂಚನೆ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net