

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಜನೌಷಧ ಕೇಂದ್ರಗಳ ಪ್ರಾರಂಭಕ್ಕೆ ಅನುಮೋದನೆ ನೀಡದಿರಲು ನಿರ್ಧರಿಸಿರುವ ಆರೋಗ್ಯ ಇಲಾಖೆ, ಈಗಾಗಲೇ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ಸ್ಥಗಿತಕ್ಕೂ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದೆ.
ಸದ್ಯ 31 ಜನೌಷಧ ಕೇಂದ್ರಗಳ ಪ್ರಾರಂಭಕ್ಕೆ ಅರ್ಜಿಗಳು ಆಯುಕ್ತರ ಹಂತದಲ್ಲಿ ಬಾಕಿ ಉಳಿದಿವೆ. ರೋಗಿಗಳು ಯಾವುದೇ ಔಷಧವನ್ನು ಆಸ್ಪತ್ರೆಯ ಹೊರಗೆ ಖರೀದಿಸದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಆದ್ದರಿಂದ ಕೇಂದ್ರಗಳ ಹಂಚಿಕೆ ಸ್ಥಗಿತಗೊಳಿಸಲು, ಅನುಮೋದನೆಗೆ ಬಾಕಿ ಇರುವ ಅರ್ಜಿಗಳನ್ನು ತಿರಸ್ಕರಿಸಲು ಆದೇಶದಲ್ಲಿ ಸೂಚಿಸಿದೆ. ಭಾರತೀಯ ಔಷಧ ಮಂಡಳಿಯು (ಬಿಪಿಪಿಐ) ಜನೌಷಧ ಕೇಂದ್ರಗಳಿಗೆ ನೋಡಲ್ ಸಂಸ್ಥೆಯಾಗಿದೆ. ಸದ್ಯ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಕೇಂದ್ರಗಳನ್ನು ಸ್ಥಗಿತಗೊಳಿಸಲು, ಒಪ್ಪಂದದ ನಿಯಮಗಳ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ. ಜನೌಷಧ ಖರೀದಿಸಲು ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮವು (ಕೆಎಸ್‌ಎಂಎಸ್‌ಸಿಎಲ್) ಬಿಪಿಪಿಐಗೆ ವಿಶೇಷ ದರ ಗೊತ್ತುಪಡಿಸಲು ಸೂಚಿಸಿದೆ. ಕೇಂದ್ರಗಳ ಸ್ಥಗಿತಕ್ಕೆ ಪರ್ಯಾಯವಾಗಿ, ಆಸ್ಪತ್ರೆಗಳು ಬಿಪಿಪಿಐನಿಂದ ಔಷಧ ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಲು ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ಹೊರಗಿನ ಜನೌಷಧ ಕೇಂದ್ರಗಳ ಸ್ಥಾಪನೆಯು ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅವುಗಳನ್ನು ಮುಂದುವರಿಸಬಹುದಾಗಿದೆ ಎಂದು ತಿಳಿಸಿದೆ.