

ಪುತ್ತೂರು ಗ್ರಾಮಾಂತರ: ದೀಪಾವಳಿ ಪ್ರಯುಕ್ತ ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಅವರು ನಡೆಸುವ ವಸ್ತ್ರದಾನ ಮತ್ತು ಸಹಭೋಜನ ಕಾರ್ಯಕ್ರಮ ಪುತ್ತೂರಿನ ಜನತೆ ಕಾರ್ಯಕ್ರಮವಾಗಿದ್ದು, ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಶಾಸಕರಿಗೆ ಆಶೀರ್ವಾದ ಮಾಡಬೇಕು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಕಾವು ಮಾಡ್ನೂರು ಕಾಲನಿಯಲ್ಲಿ ಶುಕ್ರವಾರ ಅಶೋಕ ಜನ-ಮನ ಕಾರ್ಯಕ್ರಮದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಮಾಡ್ನೂರು ಗ್ರಾಮದ ಉಜ್ರುಗುಳಿ, ಮಾಡಂದೂರು, ತೋಟದ ಮೂಲೆ ಕಾಲನಿಗಳಲ್ಲಿ ಪ್ರಚಾರ ಸಭೆ ನಡೆಯಿತು.
ಬಡವ, ಬಲ್ಲಿದರೆಂಬ ಹಾಗೂ ಜಾತಿ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಳೆದ ಬಾರಿ ಕಾರ್ಯಕ್ರಮ ನಡೆದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲೇ ಈ ಬಾರಿಯೂ ಕಾರ್ಯಕ್ರಮ ನಡೆಯಲಿದೆ. 75 ಸಾವಿರಕ್ಕೂ ಮಿಕ್ಕಿ ಜನ ಭಾಗವಹಿಸಲಿದ್ದಾರೆ ಎಂದರು.
ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಕಾರ್ಯಕ್ರಮದ ಬಗ್ಗೆ ಮನೆ ಮನೆಗೂ ತಿಳಿಸುವ ಕೆಲಸ ನಡೆಯುತ್ತಿದೆ. ಗ್ರಾಮದ ಪ್ರತಿಯೊಬ್ಬರಿಗೂ ಆಹ್ವಾನ ನೀಡಲಾಗುತ್ತಿದ್ದು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿಕೊಂಡರು.
ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಗ್ರಾಪಂ ಸದಸ್ಯರಾದ ದಿವ್ಯನಾಥ ಶೆಟ್ಟಿ ಕಾವು, ರೈ ಎಸ್ಟೇಟ್ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್‌ನ ಯೋಗೀಶ್ ಸಾಮಾನಿ, ಸತೀಶ್ ರೈ ನಿಡ್ಪಳ್ಳಿ ಉಪಸ್ಥಿತರಿದ್ದರು.