ಹದಗೆಟ್ಟ ನಯನಾಡು ಸಂಪರ್ಕ ರಸ್ತೆ: ಯುವಕರ ತಂಡದಿಂದ ದುರಸ್ತಿ ಕಾರ್ಯ

Btw_Link Road
Published on

ಬಂಟ್ವಾಳ: ಗ್ರಾಮೀಣ ಪ್ರದೇಶವಾದ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಮೂರ್ಜೆಯಿಂದ ಕೊಳಕ್ಕೆಬೈಲು ಮೂಲಕ ನಯನಾಡನ್ನು ಸಂಪರ್ಕಿಸುವ ಹದಗೆಟ್ಟ ರಸ್ತೆಯನ್ನು ಯುವಕರ ತಂಡವೊಂದು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದು, ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿದೆ.

ಈ ರಸ್ತೆ ಡಾಂಬರು ಕಿತ್ತುಹೋಗಿ ಹದಗೆಟ್ಟು ಹೊಂಡ-ಗುಂಡಿಗಳಿಂದ ತುಂಬಿದ್ದು, ಸಂಚಾರಕ್ಕೆ ದುಸ್ತರವಾಗಿತ್ತು. ಇದನ್ನು ಮನಗಂಡ ಸ್ಥಳೀಯ ಯುವಕರ ತಂಡ ನಯನಾಡು ಗೆಳೆಯರ ಬಳಗದ ಸದಸ್ಯರು ದಾನಿಗಳ ಸಹಕಾರದಿಂದ ಶ್ರಮದಾನದ ಮೂಲಕ ಸುಮಾರು 4.5 ಕಿಲೋಮೀಟರ್ ದೂರದ ಹದಗೆಟ್ಟ ರಸ್ತೆ ದುರಸ್ತಿಗೊಳಿಸಿದರು. ಕಾಂಕ್ರೀಟ್ ಮಿಕ್ಸರ್ ಯಂತ್ರ ಬಳಸಿಕೊಂಡು ಗುಂಡಿಬಿದ್ದ ಭಾಗಗಳಿಗೆ ಹೊಸ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಲಾಯಿತು. ಜೆಸಿಬಿ ಯಂತ್ರದ ಸಹಾಯದಿಂದ ಚರಂಡಿ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಲಾಯಿತು.

ಶ್ರಮದಾನದಲ್ಲಿ ಗೆಳೆಯರ ಬಳಗದ ಸಂಚಾಲಕ ಎಲಿಯಾಸ್ ಕ್ರಾಸ್ತಾ, ಅಧ್ಯಕ್ಷ ಡೋನ್ ಪ್ರವೀಣ್ ಕ್ರಾಸ್ತಾ, ಕಾರ್ಯದರ್ಶಿ ಅನಿಲ್ ಮೊರಾಸ್, ಗೆಳೆಯರ ಬಳಗದ ಗೌರವಾಧ್ಯಕ್ಷ, ಗ್ರಾಪಂ ಸದಸ್ಯ ನೆಲ್ವಿಸ್ಟರ್ ಪಿಂಟೋ, ನಿರ್ದೇಶಕರಾದ ವಸಂತ ಪೂಜಾರಿ, ಲೋಕೇಶ್ ಪೂಜಾರಿ, ಸಂತೋಷ್ ಫರ್ನಾಂಡಿಸ್, ವಿಘ್ನೇಶ್ ಪೂಜಾರಿ, ಮಧುಕರ ಶೆಟ್ಟಿ, ಜೋಯೆಲ್ ಲೋಬೊ, ಅರುಣ್ ಫರ್ನಾಂಡಿಸ್, ವಿನ್ಸೆಂಟ್ ಗಲ್ಬಾಂ, ಎಮರ್ಸನ್ ಕ್ರಾಸ್ತಾ ಹಾಗೂ ಗೆಳೆಯರ ಬಳಗ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿದ್ದರು.

ಸಮೀಪದ ದೈಕಿನಕಟ್ಟೆ-ಮಂಚಗುಡ್ಡೆ ರಸ್ತೆಯ ಹೊಂಡ-ಗುಂಡಿಗಳಿಗೆ ಮತ್ತು ನಯನಾಡು ದೇಬಿತ್ತಿಲ್‌ಎಂಬಲ್ಲಿಯೂ ಕಾಂಕ್ರೀಟ್ ಹಾಕಲಾಯಿತು. ಸ್ಥಳೀಯ ಉದ್ಯಮಿ ಆನಂದ ತೀರ್ಥ ಶ್ರಮದಾನ ನಿರತರಿಗೆ ಭೋಜನ ವ್ಯವಸ್ಥೆಗೊಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net