ಚಿಂಚೋಳಿಯಲ್ಲಿ ಜನತಾ ದರ್ಶನ ಶುರು: ಜನರ ಬಳಿಗೆ ಆಡಳಿತ ಸರ್ಕಾರದ ಬದ್ಧತೆ - ಸಚಿವ ಪ್ರಿಯಾಂಕ್ ಖರ್ಗೆ

IMG-20230925-WA0015
Published on

ವಿಜಯವಾಣಿ ಸುದ್ದಿಜಾಲ ಚಿಂಚೋಳಿ

ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ‌ ಬಳಿ ಬರುವ ಬದಲು ಸರ್ಕಾರವೇ ಜನರ ಬಳಿಗೆ ಬರುವ ವಿನೂತನ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

ಚಿಂಚೋಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ‌ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮ ಇಂದು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

" ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಜನರ ಸಮಸ್ಯೆಗಳ ಪರಿಹಾರಕ್ಕೆ ಸರ್ವ ಪ್ರಯತ್ನ ನಡೆಸುತ್ತಿದ್ದು ಆಡಳಿತವನ್ನೇ ನಿಮ್ಮ ಮನೆಬಾಗಿಲಿಗೆ ಕರೆದುಕೊಂಡು ಬಂದು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಇದು ನಮ್ಮ ಸರ್ಕಾರದ ಬದ್ದತೆಯಾಗಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ " ಎಂದು ಹೇಳಿದರು.

ಕಲಬುರಗಿ ಕನೆಕ್ಟ್ ಎನ್ನುವ QR code ಸ್ಥಾಪಿಸಲಾಗಿದ್ದು ಜಿಲ್ಲೆಯ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು QR ಕೋಡ್ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಬಹುದು ಎಂದು ಹೇಳಿದ ಸಚಿವರು, ಒಂದು ತಿಂಗಳ ಅವಧಿಯಲ್ಲಿ QR ಕೋಡ್ ಮೂಲಕ 560 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅವುಗಳಲ್ಲಿ 300 ಅರ್ಜಿಗಳಿಗೆ ಪರಿಹಾರ ಸೂಚಿಸಿ ವಿಲೇವಾರಿ ಮಾಡಲಾಗಿದೆ ಎಂದರು.

ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳ ಪೈಕಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಲಾಗಿದೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಹಾಗೂ ಶಕ್ತಿಯೋಜನಗೆಳ ಅಡಿಯಲ್ಲಿ ಈ ರಾಜ್ಯದ ಬಡವರ ಮಧ್ಯಮ ವರ್ಗದ ಜನರಿಗೆ ಯೋಜನೆಗಳ ಲಾಭ ತಲುಪಿಸಲಾಗಿದೆ. ಕಲ್ಯಾಣ ಕರ್ನಾಟಕ‌ ಅಭಿವೃದ್ದಿ ಮಂಡಳಿಗೆ ರೂ 5,000 ಕೋಟಿ ವಾರ್ಷಿಕ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದೇವು ಅದರಲ್ಲಿ ಈಗಾಗಲೇ ರೂ 3000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳು ಕೆಲಸ ಮಾಡಲು ಹೋದಾಗ ಅವರ ಮಕ್ಕಳ ಪಾಲನೆ ಮಾಡಲು ಕೂಸಿನ ಮನೆ ಎನ್ನುವ ನೂತನ ಯೋಜನೆ ಜಾರಿಗೆ ತರಲಾಗಿದೆ. ಇಲ್ಲಿ ಅಂತಹ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ.

ಕಕ ಭಾಗದ ನಿರುದ್ಯೋಗಿ ಯುವಕ ಯುವತಿಯರು ಕೆಎ ಎಸ್ ಹಾಗೂ ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಅವರಿಗೆ ತರಬೇತಿ ನೀಡಲು " ನೈಸ್ " ( NICE - Nagavi Institute of Competitive Examinations) ಹೆಸರಿನಲ್ಲಿ ತರಬೇತಿ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಹಿಳೆಯರಿಗಾಗಿ ರೂ 30 ಲಕ್ಷ ವೆಚ್ಚದಲ್ಲಿ ಶೌಚಾಲಯ ಸ್ಥಾಪನೆಯನ್ನು ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ 400 ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಇಂತಹ ಶೌಚಾಲಯ ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮಪಂಚಾಯತಗಳಿಗೆ ವಹಿಸಲಾಗುತ್ತಿದ್ದು, ಜಿಪಂ ಸಿಇಓ ಈ ನಿಟ್ಟಿನಲ್ಲಿ ಸಂಬಂಧಿಸಿದ ಗ್ರಾಪಂ ಗಳಿಗು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ನಮ್ಮ ಸರ್ಕಾರ ಈ ಭಾಗದ ಸಮಗ್ರ ಅಭಿವೃದ್ದಿಗೆ ಬದ್ಧವಾಗಿದೆ ಎಂದು ಒತ್ತಿ ಹೇಳಿದ ಸಚಿವರು ಚಿಂಚೋಳಿಯ ಅಭಿವೃದ್ದಿಗೆ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಶಾಸಕರಾದ ಅವಿನಾಶ್ ಜಾಧವ ಹಾಗೂ ತಿಪ್ಪಣ್ಣಪ್ಪ ಕಮಕನೂರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಚಿಂಚೋಳಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಚಿವರಿಗೆ ಧನ್ಯವಾದ ಅರ್ಪಿಸಿದ ಶಾಸಕ ಅವಿನಾಶ್ ಜಾಧವ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಆಡಳಿತ ಜನಪರವಾಗಿದ್ದು ಸಾರ್ವಜನಿಕರ ಸಮಸ್ಯೆ ಆಲಿಸಲು ಸರ್ಕಾರವನ್ನೇ ಜನರ ಬಳಿಗೆ ತೆಗೆದುಕೊಂಡು ಬಂದಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರೇರಣೆಯಿಂದಾಗಿ ಜನಪರ ಕೆಲಸಗಳು ನಡೆಯುತ್ತಿವೆ. ಅವರ ಜನರ ಸೇವೆ ಹೀಗೆ ಮುಂದುವರೆಯಲಿ ನಿಮ್ಮೆಲ್ಲರ ಆಶೀರ್ವಾದವಿದ್ದರೆ ಅವರು ಈ ದೇಶದ ಪ್ರಧಾನಿಯಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್,‌ಜಿಪಂ ಸಿಇಓ ಭಂವರಕುಮಾರ ಮೀನಾ, ಕೆಕೆಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net