

ವಿಜಯವಾಣಿ ಸುದ್ದಿಜಾಲ ಕಡಬ
ದ.ಕ.ಜಿಲ್ಲೆಯ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಬಹಳಷ್ಟು ವರ್ಷಗಳಿಂದ ಜಟಿಲವಾಗಿ ಉಳಿದಿರುವ ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ನಡುವಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಸರ್ವೇ ತಂಡ ರಚಿಸಿ ಸಮರೋಪಾದಿಯಲ್ಲಿ ಪರಿಹಾರ ನೀಡಲಾಗುವುದು. ಜನತಾ ದರ್ಶನದ ಮೂಲಕ ಸಲ್ಲಿಕೆಯಾದ ಅಹವಾಲುಗಳು ಫಲಪ್ರದವಾಗಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಆರೋಗ್ಯ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಡಬದ ಸೇಂಟ್ ಜೋಕಿಮ್ಸ್ ಸಭಾಂಗಣದಲ್ಲಿ ಶನಿವಾರ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕ ಸೇವೆಗಿರುವುದು ಎಂಬ ಮಾನಸಿಕತೆ ಬೆಳೆಸಿಕೊಂಡು ಜನ ಸಾಮಾನ್ಯರೊಡನೆ ಗೌರವದಿಂದ ನಡೆದುಕೊಳ್ಳಬೇಕು. ಸರ್ಕಾರಿ ಸೇವೆಯಲ್ಲಿ ಮಾನವೀಯತೆ ಇದ್ದಾಗ ಜನರ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತವೆ. ತಳಮಟ್ಟದಲ್ಲಿರುವ ಅಧಿಕಾರಿಗಳು ಜನರ ಸಮಸ್ಯೆಗೆ ತೀರ್ಮಾನ ಕೈಗೊಂಡಾಗ ಜನರ ಸಮಸ್ಯೆ ತಾರ್ಕಿಕ ಅಂತ್ಯ ಕಂಡು ಮೇಲಧಿಕಾರಿ, ಜನಪ್ರತಿಧಿಗಳ ಹೊರೆ ಕಡಿಮೆಯಾಗುತ್ತದೆ ಎಂದರು.
ದ.ಕ ಜಿಲ್ಲಾ ಸಿಇಒ ಡಾ.ಆನಂದ, ಪುತ್ತೂರು ಉಪವಿಭಾಗದ ಪ್ರಭಾರ ಡಿವೈಎಸ್‌ಪಿ ವಿಜಯ ಪ್ರಸಾದ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಜಿ., ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ಮಂಗಳೂರು ಕಾರ್ಪರೇಟರ್ ವಿನಯರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಶೆಟ್ಟಿ, ಪುತ್ತೂರು ವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಅಧಿಕಾರಿಗಳಾದ ಶ್ರವಣ್, ಅಕ್ಷಯ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಕಡಬ ತಹಸೀಲ್ದಾರ ಪ್ರಭಾಕರ ಖಜೂರೆ, ಕಡಬ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೆಂಪೇಗೌಡ, ಕಡಬ ತಾಲೂಕು ಕಚೇರಿ ಉಪತಹಸೀಲ್ದಾರ್ ಮನೋಹರ್ ಕೆ.ಟಿ., ಗೋಪಾಲ್ ಕಲ್ಲುಗುಡ್ಡೆ, ಲೋಕೋಪಯೋಗಿ ಇಲಾಖಾ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ. ಮೊದಲಾದವರು ಇದ್ದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸ್ವಾಗತಿಸಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.
ಸಭಾಂಗಣದ ಹೊರಗಡೆ ವಿವಿಧ ಇಲಾಖೆಗಳ 12 ಕೌಂಟರ್ ತೆರೆಯಲಾಗಿತ್ತು. ಆಯಾ ಇಲಾಖೆಗಳ ಕೌಂಟರ್‌ನಲ್ಲಿ ದೂರು ಸ್ವೀಕರಿಸಿ ಟೋಕನ್ ನಂಬರ್ ನೀಡಲಾಗುತ್ತಿತ್ತು. ಬಳಿಕ ಸಭಾಂಗಣದಲ್ಲಿ ಟೋಕನ್ ನಂಬರ್ ಪ್ರಕಾರವಾಗಿ ಸಚಿವರ ಎದುರು ಕೂತು ಅಹವಾಲು ವಿವರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳನ್ನು ಬಳಿಗೆ ಕರೆದು ಸಮಸ್ಯೆ ಪರಿಹರಿಸುವಂತೆ ಸಚಿವರು ಸೂಚಿಸುತ್ತಿದ್ದರು. ನಿಗದಿತ ಸಮಯಕ್ಕಿಂತ 1.30 ತಾಸು ತಡವಾಗಿ ಸಚಿವರು ಆಗಮಿಸಿದ್ದು, ತಡವಾಗಿದ್ದಕ್ಕೆ ಕ್ಷಮೆಯಾಚಿಸಿದರು. ಅಂಗವಿಕಲರ ಅಹವಾಲನ್ನು ಸಚಿವರ ವೇದಿಕೆಯಿಂದ ಕೆಳಗಿಳಿದು ಬಂದು ಸ್ವೀಕರಿಸಿ ಪರಿಹಾರ ಸೂಚಿಸಿದರು. 250 ಅರ್ಜಿ ಸ್ವೀಕರಿಸಲಾಯಿತು. ಕಂದಾಯ, ಅರಣ್ಯ, ಪ್ಲಾಟಿಂಗ್ ಮುಂತಾದ ಸಮಸ್ಯೆಗಳ ಕುರಿತು ಹೆಚ್ಚಿನ ಅಹವಾಲು ಇದ್ದವು.