

ಬೆಂಗಳೂರು: ಜನಸ್ಪಂದನ ಕೇವಲ ಜನರ ಅಹವಾಲು ಆಲಿಸುವುದಕ್ಕೆ ಸೀಮಿತ ವಾಗದೆ ಒಂದಷ್ಟು ಮಂದಿ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಪಡೆದುಕೊಳ್ಳುವುದಕ್ಕೂ ಕಾರಣವಾಯಿತು. ವೇದಿಕೆಯು ಜನಸಾಮಾನ್ಯರ ಅಹವಾಲು ಆಲಿಕೆ, ದಾಖಲೀಕರಣ, ಭರವಸೆ, ಅಭಯ ನೀಡುವುದಕ್ಕೆ ಸಾಕ್ಷಿಯಾಯಿತು. ಸಿಎಂ ಸಿದ್ದರಾಮಯ್ಯ ಸಾವಿರಾರು ಜನರ ದೂರು ದುಮ್ಮಾನ ಆಲಿಸಿ, ಸಮಸ್ಯೆಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಈ ಮೂಲಕ ಜನರಲ್ಲಿ ಜನಸ್ಪಂದನದ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸವೂ ಆಯಿತು.
ರಾಮನಗರ ಜಿಲ್ಲೆಯ ವಿಜಯಕುಮಾರ್ ಎಂಬುವವರಿಗೆ ಕಿಡ್ನಿ ಕಸಿ ಚಿಕಿತ್ಸೆ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಸನಗೌಡ ಬಿರಾದಾರ್ ಎಂಬುವರ ಬೋನ್ ಮ್ಯಾರೋ ಕಸಿಗಾಗಿ ತಲಾ 4 ಲಕ್ಷ ರೂ. ಧನಸಹಾಯವನ್ನು ಮುಖ್ಯಮಂತ್ರಿಯವರು ಸ್ಥಳದಲ್ಲಿಯೇ ಮಂಜೂರು ಮಾಡಿದರು. ತುಮಕೂರು ಜಿಲ್ಲೆಯ 8 ವರ್ಷದ ಶಾಂಭವಿ ಎಂಬ ಮಗುವಿಗೆ ಶ್ರವಣ ಸಾಧನಕ್ಕಾಗಿ 50 ಸಾವಿರ ರೂ., ಕೋಲಾರ ಜಿಲ್ಲೆಯ ಕೆ.ಜಿ.ಎಫ್ನ 8 ವರ್ಷದ ಎನ್.ಕೃಷ್ಣ ಅವರಿಗೆ 1 ಲಕ್ಷ ರೂ. ಗಳ ಪರಿಹಾರವನ್ನು ಸ್ಥಳದಲ್ಲಿಯೇ ಘೊಷಿಸಿದರು. ಡಬ್ಬಲ್ ಡಿಗ್ರಿ ಮುಗಿಸಿರುವ ಬೆಂಗಳೂರಿನ ನಿವಾಸಿ ವಿಶಿಷ್ಠ ಚೇತನ ನವ್ಯಶ್ರೀ ಅವರು ತಾಯಿ ರಮಾಮಣಿ ಅವರ ಜತೆ ಬಂದು ಉದ್ಯೋಗಕ್ಕಾಗಿ ಮನವಿ ಮಾಡಿದರು. ಉದ್ಯೋಗ ಮೇಳದ ವೇಳೆ ಈ ಅರ್ಜಿ ಪರಿಗಣಿಸುವಂತೆ ಮುಖ್ಯ ಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು. ವಿಶಿಷ್ಟ ಚೇತನ ಸತ್ಯನಾರಾಯಣ ಅವರು ಡಯಾಲಿಸಿಸ್ಗೆ ನೆರವು ಕೊಡಿಸುವಂತೆ ಮನವಿ ಮಾಡಿದಾಗ, ಅರ್ಜಿ ಪರಿಶೀಲಿಸಿ ಚಿಕಿತ್ಸೆಗೆ ನೆರವು ನೀಡುವಂತೆ ಸಿಎಂ ಸೂಚಿಸಿದರು. ಬೆಂಗಳೂರಿನ ಜೆ.ಜೆ.ನಗರ ನಿವಾಸಿ ಎಂ.ಶ್ರೀಧರ್ ಮೂತ್ರಪಿಂಡಗಳು ವಿಫಲವಾಗಿದ್ದು, ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ಇವರ ಸಮಸ್ಯೆಗೆ ಸಿಎಂ ಸ್ಪಂದಿಸಿ ಪರಿಹಾರ ಭರವಸೆ ನೀಡಿದರು. ರಾಯಚೂರಿನ ಮೂರು ವರ್ಷದ ಶುಶಾಂತ್ ಥಲೆಸ್ಸೆಮಿಯಾ ಕಾಯಿಲೆಗೆ ತುತ್ತಾಗಿದ್ದಾನೆ. ಈತನನ್ನು ಕಾರ್ಯಕ್ರಮಕ್ಕೆ ಕರೆತಂದ ತಾಯಿ ಲಲಿತಾ ಎಂಬುವರು ಆರ್ಥಿಕ ಸಹಾಯಕ್ಕೆ ಮನವಿ ಸಲ್ಲಿಸಿದರು. ಅರ್ಜಿ ಸ್ವೀಕರಿಸಿದ ಸಿದ್ದರಾಮಯ್ಯ ನೆರವಿನ ಭರವಸೆ ನೀಡಿದರು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬಂತಹಳ್ಳಿಯ 50 ವರ್ಷದ ನಾರಾಯಣಸ್ವಾಮಿ ಖಾತೆ ಬದಲಾವಣೆ ಮಾಡಲಾಗಿದ್ದು ಸರಿಪಡಿಸಿಕೊಡುವಂತೆ ಕೋರಿದರು. ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಭಾವೋದ್ವೇಗ: ಬೆಳಗಾವಿ ಜಿಲ್ಲೆಯ ಸುರೇಶ್ ತುಕಾರಾಂ ಫೋಂಡೆ ಎಂಬುವರು ಜಮೀನಿನಲ್ಲಿ ದೀಪಕ್ ಪಾಟೀಲ್ ಎಂಬುವರು ಮಣ್ಣು ತೆಗೆಯುತ್ತಿದ್ದು ಕಳವು ಪ್ರಕರಣ ದಾಖಲಿಸಿಲ್ಲ ಎಂದು ಸಿಎಂ ಬಳಿ ದೂರಿದರು. ಭಾವೋದ್ವೇಗಕ್ಕೆ ಒಳಗಾದ ಅವರು, ನೀವು ತಕ್ಷಣ ಪರಿಹಾರ ಕೊಡಿಸಿ ಎಂದು ಹಠ ಹಿಡಿದಾಗ, ಸಮಾಧಾನಿಸಿದ ಸಿಎಂ ಕೂಡಲೇ ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿ ಸೂಚನೆ ಕೊಡಿ ಎಂದು ಪೊಲೀಸ್ ಆಯುಕ್ತರಿಗೆ ಸೂಚಿಸಿದರು.
ಅಪಘಾತಕ್ಕೆ ಒಳಗಾದ ಲೋಕೇಶ್ ಪುಟ್ಟನಾಯಕ ಅವರಿಗೆ ಸಿಎಂ ಪರಿಹಾರ ನಿಧಿಯಿಂದ 50 ಸಾವಿರ ರೂ. ಪರಿಹಾರ ಘೊಷಿಸಿ, ಬಿಡುಗಡೆ ಪತ್ರ ನೀಡಲಾಯಿತು. ಕಲ್ಲಪ್ಪ ಎಂಬ ನೋಂದಾಯಿತ ಕಾರ್ವಿುಕ ನಿಧನರಾಗಿದ್ದು, ಕುಟುಂಬಕ್ಕೆ ಸಲ್ಲಿಕೆ ಯಾಗಬೇಕಿದ್ದ ಅಂತಿಮ ಸಂಸ್ಕಾರ ಹಾಗೂ ಅನುಗ್ರಹ ರಾಶಿ ಮೊತ್ತ ತಲುಪದೇ ಇರುವ ವಿಚಾರವನ್ನು ಅವರ ಪುತ್ರ ಸಿಎಂ ಗಮನಕ್ಕೆ ತಂದರು. ಕೂಡಲೇ 54 ಸಾವಿರ ರೂ. ಪರಿಹಾರ ಬಿಡುಗಡೆಗೆ ಆದೇಶಿಸಿದರು. ಆ ಕೂಡಲೇ ಹಣ ಜಮಾ ಮಾಡಲಾಯಿತು.
ಮರುಗಿದ ಸಿಎಂ
ತುಮಕೂರಿನ ಮಡಕಶಿರಾ ಗ್ರಾಮದ ಶಾಂತಿಬಾಯಿ ಅವರ ಬುದ್ಧಿಮಾಂದ್ಯ ಮಗುವಿನ ಪರಿಸ್ಥಿತಿ ಕಣ್ಣಾರೆ ಕಂಡು ಮರುಗಿದ ಸಿಎಂ ನೆರವಿನ ಅಭಯ ನೀಡಿದರು. ನೆಲಮಂಗಲದ ಕ್ಯಾನ್ಸರ್ ರೋಗಿ ಚೌಡೇಶ್ವರಿ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ಕೋರಿ ನೀಡಿದ ಮನವಿ ಸ್ವೀಕರಿಸಿದ ಸಿಎಂ, ಪರಿಹಾರ ನಿಧಿ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಶರಣ ಬಸವ ಕುಮಾರ್ ಅವರ ಕಣ್ಣುಗಳು ಕಾಣದಾಗಿದ್ದು ಸ್ವಂತ ಉದ್ಯೋಗ ಕೈಗೊಳ್ಳಲು ನೆರವು ಕೋರಿದರು. ಸಿಎಂ ನೆರವಿನ ಅಭಯ ನೀಡಿದರು.
ಗ್ರಂಥಾಲಯ ನವೀಕರಣ
ಬೆಂಗಳೂರಿನ ಮಹಾಬೋಧಿ ಸಂಶೋಧನಾ ಕೇಂದ್ರ ಬೌದ್ಧ ಜನಾಂಗದ ಆಧ್ಯಾತ್ಮಿಕ ಗ್ರಂಥಾಲ ಯದ ನವೀಕರಣಕ್ಕಾಗಿ 20 ಲಕ್ಷ ರೂ. ಅನುದಾನ ಕೋರಿ ಸಲ್ಲಿಸಿದ ಮನವಿ ಪರಿಶೀಲಿಸಿ ಕ್ರಮ ಕೈಗೊ ಳ್ಳುವುದಾಗಿ ಸಿಎಂ ತಿಳಿಸಿದರು.ಲುಂಬಿನಿ ಬುದ್ಧ ವಿಹಾರ ಸಂಸ್ಥೆಯವರು ಆಯವ್ಯಯದಲ್ಲಿ ಬೌದ್ಧ ಸಮುದಾಯದ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ನೀಡಿ, ಬೌದ್ಧ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸುವಂತೆ ಮನವಿ ಸಲ್ಲಿಸಿದರು.
ರೂಢಿದಾರಿ ಸಮಸ್ಯೆ
ತುಮಕೂರು ಜಿಲ್ಲೆ ಶಿರಾ ತಾಲೂಕಿನ ನಾಗರಾಜಯ್ಯ ಅವರು ರೂಢಿ ದಾರಿ ಕಡಿದು ಹಾಕಿರುವುದರಿಂದ 5 ಕಿ.ಮೀ ಬಳಸಿಕೊಂಡು ಓಡಾಡಬೇಕಿದ್ದು, ಸರಿಪಡಿಸುವಂತೆ ಕೋರಿದರು. ಸಿಎಂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಧ್ವನಿ ನೀಡಿ
ಟಿ.ದಾಸರಹಳ್ಳಿಯ ಎ.ಎನ್. ಲೋಕೇಶ್ ಎಂಬುವರು ಕ್ಯಾನ್ಸರ್ ರೋಗಿಯಾಗಿದ್ದು, ಮೂರು ವರ್ಷದ ಹಿಂದೆ ಚಿಕಿತ್ಸೆಗಾಗಿ ಧ್ವನಿ ಪೆಟ್ಟಿಗೆ ತೆಗೆದು ಹಾಕಲಾಗಿದೆ. ಕೃತಕ ಧ್ವನಿಪೆಟ್ಟಿಗೆ ಕೊಡಿಸುವ ಮೂಲಕ ನನಗೆ ಧ್ವನಿ ನೀಡಿ ಎಂದು ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಸಿಎಂ ತಂಡ, ಧ್ವನಿ ಪೆಟ್ಟಿಗೆಯ ವೆಚ್ಚವನ್ನು ಸಿಎಂ ವೈದ್ಯಕೀಯ ಪರಿಹಾರ ನಿಧಿಯಿಂದ ಭರಿಸಿ, ಉಚಿತ ಚಿಕಿತ್ಸೆ ನೀಡಿ ಎಂದು ಕಿದ್ವಾಯಿ ನಿರ್ದೇಶಕರಿಗೆ ಸೂಚಿಸಿದರು. ನಂಜನಗೂಡು ತಾಲೂಕು ಯಲಚಗೆರೆ ಗ್ರಾಮದ ಎಂ.ಯೋಗೇಂದ್ರ ಪ್ರಸಾದ್ ಎಂಬುವರು ವಿಶೇಷ ದೂರೊಂದನ್ನು ಸಲ್ಲಿಸಿದರು. ತಾವು ತಾತ್ಕಾಲಿಕ ಕೃಷಿಕರಾಗಿದ್ದು, ಮೈಸೂರು ಕೆ.ಆರ್.ಆಸ್ಪತ್ರೆ ದಂತ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ಕೋರಿಕೆ ಸಲ್ಲಿಸಿದ್ದೆ. ಹಲ್ಲು ಸ್ವಚ್ಛಗೊಳಿಸಿ, ಸ್ಕಾ್ಯನಿಂಗ್ ಮಾಡಿ, ದವಡೆ ಹಲ್ಲು ಕಟ್ಟಿಸಿಕೊಡಿ ಎಂದು ಕೇಳಿಕೊಂಡಿದ್ದೆ. ಆದರೆ ನಮ್ಮಲ್ಲಿ ಸೌಲಭ್ಯ ಇಲ್ಲ ಎಂದು ವೈದ್ಯರು ವಾಪಸ್ ಕಳಿಸಿದ್ದಾರೆ. ನನ್ನಂತೆ ಬೇರೆಯವರಿಗೂ ಆಗಬಾರದು. ನನಗೆ ದವಡೆ ಹಲ್ಲು ಕಟ್ಟಿಸಿಕೊಡಿ ಎಂದು ಮನವಿ ಸಲ್ಲಿಸಿದರು. ಅರ್ಜಿ ಸ್ವೀಕರಿಸಿದ ಅಧಿಕಾರಿ ಡಾ.ಸುಜಾತಾ ರಾಥೋಡ್, ಬಡವ ಎಂಬ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸಾ ವೆಚ್ಚ ಮನ್ನಾ ಮಾಡಿ ದವಡೆ ಹಲ್ಲು ಕಟ್ಟಿಸಿ ಕೊಡಿ ಎಂದು ಆಸ್ಪತ್ರೆಗೆ ತಾಕೀತು ಮಾಡಿದ್ದಾರೆ.
ಮಗಳಿಗೆ ಸ್ವಾಧೀನವಿಲ್ಲ, ನೆರವು ಸಿಗುತ್ತಿಲ್ಲ
ನನ್ನ ಮಗಳಿಗೆ ನಿಲ್ಲಲು ಸಾಧ್ಯವಿಲ್ಲ, ಸ್ವಾಧೀನವಿಲ್ಲ. ಮಾತನಾಡುವುದಕ್ಕೂ ಆಗುವುದಿಲ್ಲ. ತಾಯಿ ತೀರಿಕೊಂಡಿದ್ದಾಳೆ. ನಮ್ಮ ಊರಲ್ಲಿ ಪಡಿತರ ಚೀಟಿ ಕೊಡುತ್ತಿಲ್ಲ, ಆಕೆಗೆ ಅಂಗವಿಕಲರ ಮಾಸಾಶನವೂ ನೀಡುತ್ತಿಲ್ಲ. ಜೀವನ ಪರ್ಯಂತ ಆಕೆಗೆ ನೆರವು ಬೇಕಿದೆ. ಅವಳ ಸ್ಥಿತಿಯನ್ನು ಬೆಂಗಳೂರಿನಲ್ಲಿನ ಅಧಿಕಾರಿಗಳು ನೋಡಲಿ ಎಂದು ಗದಗ ಜಿಲ್ಲೆ ನರಗುಂದ ತಾಲೂಕು ಬೆನಕಾ ಪುರದಿಂದ ಬಂದಿದ್ದೇವೆ ಎಂದು ಮಹಿಳೆಯೊಬ್ಬರು ಭಾವುಕರಾದರು.
ಅಪರೂಪದ ಕಾಯಿಲೆಗೆ ನೆರವಿನ ಬೇಡಿಕೆ
ಬಾಗೇಪಲ್ಲಿಯ ಬಸವರಾಜ್ ಕೂಡಂಗಲ್ ಎಂಬುವರು ಮಸ್ಕುಲರ್ ಡಿಸ್ ಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಇದು ವಂಶವಾಹಿಯಾಗಿ ಬರಲಿದೆ. ಆದ್ದರಿಂದ ತಮ್ಮ ಮಗ ತನ್ಮಯ್ (7)ಗೆ ಈ ಪರೀಕ್ಷೆ ಮಾಡಿಸಲು ಉಚಿತ ನೆರವು ಕೊಡುವಂತೆ ಕೋರಿದರು. ನನ್ನ ಮಗು ಸಾನ್ವಿ (3) ಥೆಲಸೇಮಿಯ ಕಾಯಿಲೆಯಿಂದ ಬಳಲುತ್ತಿದ್ದು, ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಮಾಡಿಸಲು ವಿಶೇಷ ಅನುದಾನ ಕೊಡಬೇಕೆಂದು ಹಾಸನ ಜಿಲ್ಲೆ ಆನೆ ಕನ್ನಂಬಾಡಿ ಮಂಜುನಾಥ್ ಮನವಿ ಸಲ್ಲಿಸಿದರು.
ಗೃಹಲಕ್ಷಿ ್ಮ ತಲುಪುತ್ತಿಲ್ಲ
ಗೃಹಲಕ್ಷ್ಮಿ ಯೋಜನೆ ನಮ್ಮ ಮನೆಯವರಿಗೆ ಸಿಗುತ್ತಿಲ್ಲ. ಒಂದು ಕಂತೂ ತಲುಪಿಲ್ಲ. ನನ್ನ ಪತ್ನಿ ನಿಧನರಾಗಿದ್ದು, ಸೊಸೆಗಾದರೂ ಯೋಜನೆ ಫಲಾನುಭವಿ ಮಾಡಿಕೊಳ್ಳಿ ಎಂದು ಅರ್ಜಿ ಕೊಟ್ಟಿದ್ದೇವೆ. ಆದರೆ ಸಾಧ್ಯವಿಲ್ಲ, ಆದೇಶ ಬಂದಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಜನ ಸ್ಪಂದನದಲ್ಲಿ ಸರ್ಕಾರದ ಗಮನ ಸೆಳೆಯಲು ಬಂದಿದ್ದೇನೆ ಎಂದು ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾಗಿ ಕಪ್ಪು ಕನ್ನಡಕ ಧರಿಸಿಯೇ ಆಗಮಿಸಿದ್ದ 76 ವರ್ಷದ ಲಕ್ಷ್ಮೀನಾರಾಯಣ ವಿವರಿಸಿದರು.
ಹಾಸ್ಟೆಲ್ಗೆ ನಿವೇಶನ ಬೇಕು
ನನಗೆ ಕಣ್ಣು ಕಾಣುವುದಿಲ್ಲ. ಜತೆಗಾರರು ಸೇರಿ ಲಗ್ಗೆರೆಯ ಲವಕುಶ ನಗರದಲ್ಲಿ ಪೃಥ್ವಿ ಹೆಲ್ತ್ ಆಂಡ್ ಚಾರಿಟಬಲ್ ಟ್ರಸ್ಟ್ ಮೂಲಕ ಹಾಸ್ಟೆಲ್ ನಡೆಸುತ್ತಿದ್ದೇನೆ. ಬಾಡಿಗೆ ಕಟ್ಟಲು ಸಾಧ್ಯವಾಗದೆ ಬೇರೆ ಬೇರೆ ಹಾಸ್ಟೆಲ್ಗೆ ಕಳಿಸುವಂತಾಗಿದೆ. ಸರ್ಕಾರ ನಮ್ಮ ಕಷ್ಟ ಕಂಡು ನಿವೇಶನ ಒದಗಿಸಿದರೆ ದಾನಿಗಳ ಸಹಾಯದಿಂದ ಹಾಸ್ಟೆಲ್ ಕಟ್ಟಿಕೊಳ್ಳುತ್ತೇವೆ. ಸರ್ಕಾರ ನಮ್ಮ ನೆರವಿಗೆ ಬರಬಹುದೆಂಬ ವಿಶ್ವಾಸದಲ್ಲಿ ಜನ ಸ್ಪಂದನಕ್ಕೆ ಬಂದಿದ್ದೇವೆ ಎಂದು ಮಹಾಲಕ್ಷ್ಮೀ ವಿವರಿಸಿದರು.
ಕಝುಕಿಸ್ತಾನದಲ್ಲಿ ಓದಲು
10 ಲಕ್ಷ ರೂಪಾಯಿ ನೆರವು
ಬೆಂಗಳೂರಿನ ನೂರ್ ಫಾತಿಮಾ ಅವರಿಗೆ ಕಝುಕಿಸ್ತಾನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಹತ್ತು ಲಕ್ಷ ರೂ. ನೆರವು ನೀಡಲಾಯಿತು. 10 ಲಕ್ಷ ರೂ.ಗಳ ಮಂಜೂರಾತಿ ಪತ್ರವನ್ನು ಮುಖ್ಯಮಂತ್ರಿಯವರು ಸ್ಥಳದಲ್ಲೇ ವಿದ್ಯಾರ್ಥಿನಿ ತಂದೆಗೆ ಹಸ್ತಾಂತರಿಸಿದರು.
ಕೆಲಸ ಕೊಡುವಂತೆ ಮೂರನೇ ಮನವಿ
ನಾನು ಅಂಧೆ, ಪತಿಯೂ ಅಂಧರಾಗಿದ್ದಾರೆ. ಮಗುವನ್ನು ಸಾಕುವುದಕ್ಕಾದರೂ ನಮಗೆ ಕೆಲಸದ ಅವಶ್ಯಕತೆ ಇದೆ. ನನಗೊಂದು ಕೆಲಸ ಕೊಡಿ ಎಂದು ಎರಡು ಬಾರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದೇನೆ. ಕೆಲಸ ಸಿಕ್ಕಿಲ್ಲ. ಮೂರನೇ ಬಾರಿ ಮನವಿ ಸಲ್ಲಿಸಲು ಬಂದಿದ್ದೇನೆ. ನಮಗೆ ಬದುಕಲು ಹಕ್ಕಿಲ್ಲವೇ? ಎಲ್ಲಾದರೂ ಕೆಲಸ ಕೊಡಲಿ ಎಂದು ಲಕ್ಷ್ಮೀದೇವಿ ನಗರದಿಂದ ಆಗಮಿಸಿದ್ದ ಶಾಲಿನಿ ತಮ್ಮ ಹಕ್ಕು ಪ್ರತಿಪಾದಿಸಿದರು.
ಮನೆಯಿಂದ ಮಗ, ಸೊಸೆ ಹೊರಹಾಕಿದ್ದಾರೆ
ನನ್ನ ಜಮೀನನ್ನು ಬರೆಸಿಕೊಂಡ ಮಗ, ಸೊಸೆ ಈಗ ನನ್ನನ್ನು ಹೊರ ಹಾಕಿದ್ದಾರೆ. ಮನೆಗೆ ಹೋದರೆ ಬಾಗಿಲು ಮುಚ್ಚುತ್ತಾರೆ. ಕೆಲವು ಸಮಯ ವೃದ್ಧಾಶ್ರಮದಲ್ಲಿ ಕಳೆದೆ. ಹಿರಿಯ ನಾಗರಿಕಳಾಗಿ ನನಗೆ ಸಿಗಬೇಕಿದ್ದ ನೆರವು ಸರ್ಕಾರದ ಕಡೆಯಿಂದ ಸಿಗಲಿಲ್ಲ, ಪೊಲೀಸರಿಗೂ ದೂರು ಕೊಟ್ಟೆ ಪ್ರಯೋಜನವಾಗಲಿಲ್ಲ. ಸಿದ್ದರಾಮಯ್ಯ ಅವರಿಗೆ ಮನವಿಕೊಟ್ಟು ನ್ಯಾಯ ಕೇಳಲು ಬಂದಿದ್ದೇನೆ ಎಂದು ದೊಡ್ಡ ಅಬ್ಬಿಗೇರಿಯ ರುದ್ರಮ್ಮಬಸವಾರಾಧ್ಯ ಕಣ್ಣೀರು ಒರೆಸಿಕೊಳ್ಳುತ್ತಲೇ ನೋವು ತೋಡಿಕೊಂಡರು.
ಕೃಷಿ ಹೊಂಡ ಕೇಳಿ, ಸಿಎಂ ನೋಡ್ಬಕಂತ ಬಂದೀನ್ರಿ
ಹೊಲ್ದಾಗ ಬೋರ್ ಹಾಕೀನ್ರಿ, ನಾಲ್ಕು ಇಂಚು ನೀರು ಬಿದ್ದಾವ. ಕೃಷಿ ಹೊಂಡ ಆದರೆ ರೇಷ್ಮೆ ಬೆಳೆಯಲು ಅನುಕೂಲ ಆಗ್ತದ. ಅದ್ಕ ಹೊಂಡಕ್ಕೆ ಅರ್ಜಿ ಕೊಟ್ಟು, ಸಿಎಂ ನೋಡ್ಬಕಂತ ಬಂದೀನ್ರಿ ಎಂದು ಹಾವೇರಿ ಜಿಲ್ಲೆ ಸವಣೂರು ತಾಲೂಕು ಹೂವಿನತಗ್ಗಿ ಗ್ರಾಮದ ಮರಿಯಪ್ಪ ಮೇಟಿ ಹೇಳುತ್ತಾ ನಸುನಕ್ಕರು.
ದಯಾಮರಣ ಕೋರಿದ ಅಂಗವಿಕಲೆ !
ಕರೊನಾ ಸೋಂಕಿನಿಂದ ಮೂರು ವರ್ಷಗಳ ಹಿಂದೆ ಗಂಡ ತೀರಿಹೋದ. ಇದ್ದೊಬ್ಬ ಮಗನನ್ನು ಕಟ್ಟಿಕೊಂಡು ಜೀವನ ಸಾಗಿಸುವುದು, ಆತನಿಗೆ ಓದಿಸುವುದು ಕಷ್ಟಸಾಧ್ಯವಾಗಿದೆ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಅಂಗವಿಕಲೆ ಮೀನಾ ಅಲವತ್ತುಕೊಂಡರು. ಅಂಗವಿಕಲೆ ಎಂಬ ಕಾರಣಕ್ಕೆ ಯಾರೂ ಕೆಲಸ ಕೊಡುತ್ತಿಲ್ಲ. ಕೆಲವರು ಕೆಲಸ ಕೊಡಲು ಮುಂದಾದರೂ ನನ್ನನ್ನು ಕೆಟ್ಟದಾಗಿ ಬಳಸಲು ಹವಣಿಸಿದರು. ದಾರಿ ಕಾಣದೆ ದಯಾಮರಣ ಕೋರಲು ಬಂದಿರುವೆ. ನಾನು ಸತ್ತು ಹೋದರೆ ಮಗನನ್ನು ನೋಡಿಕೊಳ್ಳುವವರು ಯಾರು ? ಎಂಬ ದಿಗಿಲಾಗುತ್ತದೆ. ಇದೇ ಕಾರಣಕ್ಕೆ ಸಿಎಂ ಗಮನಸೆಳೆಯಲು ಬಂದಿರುವೆ ಎಂದು ಹೇಳಿಕೊಂಡರು.
ಆದೇಶ ಆದರೂ ಜಾರಿಯಾಗಿಲ್ಲ !
ಫಾರೆಸ್ಟ್ ವಾಚರ್ ಎಂದು 1984ರಿಂದ ದಿನಗೂಲಿಗಳಾಗಿ ಐದು ಜನ ಕೆಲಸ ಮಾಡುತ್ತಿದ್ದೇವೆ. ಸೇವಾಭದ್ರತೆ ಒದಗಿಸಿ ಗಾರ್ಡ್ಗಳೆಂದು 2019ರಲ್ಲೇ ಆದೇಶವಾಗಿದ್ದರೂ ಜಾರಿಯಾಗಿಲ್ಲ. ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಎಂಬುವರು ಕಳೆದ ವರ್ಷ ಮೃತಪಟ್ಟಿದ್ದು, ಕಾಯಂ ಹಾಗೂ ಪರಿಹಾರದಿಂದ ವಂಚಿತರಾಗಿದ್ದಾರೆ. ಇದು, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ನೇಸರಗಿ ಅರಣ್ಯ ವಲಯದ ವಾಚರ್ ಇಮಾಮ್ ಸಾಬ್ ಸನದಿ ಅಳಲು.
ತೊಟ್ಟು ನೀರು ಕುಡಿದಿಲ್ಲ, 18 ಸಾವಿರ ಬಿಲ್!
ತೊಟ್ಟು ಕಾವೇರಿ ನೀರು ಕುಡಿದಿಲ್ಲ, ಆಗಲೇ ಹದಿನೆಂಟು ಸಾವಿರ ಬಿಲ್ ಬಂದಿದೆ. ಬಿಲ್ಕಟ್ಟದೇ ಇದ್ದರೆ ಸ್ಯಾನಿಟರಿ ಸಂಪರ್ಕ ಕಡಿತ ಮಾಡುವುದಾಗಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಹೀಗಾದರೆ ಜನ ಸಾಮಾನ್ಯರು ಬದುಕುವುದಾದರೂ ಹೇಗೆ? ಕಾವೇರಿ ಸಂಪರ್ಕಕ್ಕಾಗಿ 55 ಸಾವಿರ ಠೇವಣಿ ಕಟ್ಟಿದ್ದೆ. ನೀರಿನ ಸಂಪರ್ಕ ಕೊಟ್ಟಿಲ್ಲ, ಮೀಟರ್ ಅಳವಡಿಸಿದ್ದರು, ತಿಂಗಳಾಗುತ್ತಿದ್ದಂತೆ ಬಿಲ್ಕಟ್ಟಿದ್ದಾರೆ. ಅಧಿಕಾರಿಗಳು ಬಾಕಿ ಕಟ್ಟಿ ಎನ್ನುತ್ತಿದ್ದಾರೆ. ಹೀಗಾಗಿ ಮೀಟರ್ ಸಹ ತಂದಿದ್ದು, ಸಿಎಂ ಗಮನಕ್ಕೆ ತರಲು ಬಂದಿದ್ದೇನೆ ಎಂದು ಯಲಹಂಕ ವಾಸಿ ಶಿವ ವಿವರಿಸಿದರು.
ಪ್ರತಿಪಕ್ಷಗಳ ಮೇಲೆ ಸಿಎಂ ವಾಗ್ದಾಳಿ
ಗ್ಯಾರಂಟಿ ಯೋಜನೆಗಳ ಬಗ್ಗೆ ಮೊದಲಿಗೆ ಪ್ರತಿಪಕ್ಷಗಳು ಅಪಪ್ರಚಾರ ಮಾಡಿದವರು. ಎಂಟು ತಿಂಗಳಲ್ಲೇ ಐದು ಗ್ಯಾರಂಟಿಗಳು ಜಾರಿಯಾದ ಬಳಿಕ ಕೆಲವೇ ತಿಂಗಳ ನಂತರ ನಿಲ್ಲಿಸುತ್ತಾರೆ ಎಂಬ ಸುಳ್ಳು ಮಾಹಿತಿ ಹರಡುತ್ತಿವೆ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಸ್ಥಗಿತವಾಗಿದೆ ಎಂಬ ಸುಳ್ಳು ಆಪಾದನೆ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲು ಸ್ವೀಕರಿಸುವ ಮುನ್ನ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ. ಅಭಿವೃದ್ಧಿ ಅರ್ಥವೇ ರಾಜ್ಯದ ವಿರೋಧ ಪಕ್ಷಗಳಿಗೆ ಗೊತ್ತಿಲ್ಲವೆಂದು ಕಿಡಿಕಾರಿದರು.
ಸಾಮಾಜಿಕ, ಆರ್ಥಿಕ ಬದಲಾವಣೆ ಹಾಗೂ ಸಮ ಸಮಾಜ ನಿರ್ವಣವೂ ಅಭಿವೃದ್ಧಿ ಭಾಗವಾಗಿದೆ. ಐದು ಗ್ಯಾರಂಟಿ ಯೋಜನೆಗಳ ಪ್ರಧಾನ ಉದ್ದೇಶವೂ ಇದೇ ಆಗಿದೆ. ಸಮಾನತೆ, ಭ್ರಾತೃತ್ವ ನೆಲೆಗೊಳಿಸಿ, ಏಳು ಕೋಟಿ ಕನ್ನಡಿಗರ ಹಿತರಕ್ಷಿಸುವುದು ಕಾಂಗ್ರೆಸ್ ಸರ್ಕಾರದ ಬದ್ಧತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲಾ ಉಸ್ತುವಾರಿ ಆಯಾ ಜಿಲ್ಲೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಈವರೆಗೆ 108 ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮಗಳಾಗಿವೆ. ರಾಜ್ಯ, ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಅಹವಾಲುಗಳಿಗೆ ಸ್ವೀಕೃತಿಪತ್ರ ನೀಡಲಾಗುತ್ತದೆ. ಮನವಿ ಕಾನೂನು ಬದ್ಧವಾಗಿದ್ದರೆ ಪರಿಹಾರ ದೊರೆಯಲಿದೆ ಎಂದು ಸಿದ್ದರಾಮಯ್ಯ ಖಚಿತಪಡಿಸಿದರು.