ಜನಸ್ಪಂದನ ಟ್ರಸ್ಟ್‌ನಿಂದ ಚಂದಹಳ್ಳಿ ಶಾಲೆಗೆ ಕಲಿಕಾ ಸಾಮಾಗ್ರಿ ಕೊಡುಗೆ

ಜನಸ್ಪಂದನ ಟ್ರಸ್ಟ್‌ನಿಂದ ಚಂದಹಳ್ಳಿ ಶಾಲೆಗೆ ಕಲಿಕಾ ಸಾಮಾಗ್ರಿ ಕೊಡುಗೆ
Published on

ತಿ.ನರಸೀಪುರ: ತಾಲೂಕಿನ ಸಿ.ಬಿ.ಹುಂಡಿ ಕ್ಲಸ್ಟರ್ ವ್ಯಾಪ್ತಿಯ ಚಂದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಇತ್ತೀಚೆಗೆ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದ ಜನಸ್ಪಂದನ ಟ್ರಸ್ಟ್ ವತಿಯಿಂದ ಉಚಿತ ಶಾಲಾ ಬ್ಯಾಗ್, ಸ್ಮಾರ್ಟ್ ಟಿವಿ, ಕಬ್ಬಿಣದ ರ‌್ಯಾಕ್, ವಿಶ್ವ ಭೂಪಟ ತಿಳಿಸುವ ಗ್ಲೋಬ್ ಅನ್ನು ವಿತರಿಸಲಾಯಿತು.

ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಮಧುರಾದಾಸ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ, ಶಿಕ್ಷಕರು ಒಂದೆಡೆ ಶ್ರಮಿಸಿದರೆ ಮತ್ತೊಂದೆಡೆ ಪಾಲಕರು, ಗ್ರಾಮಸ್ಥರು ಹಾಗೂ ಸೇವಾ ಮನೋಭಾವದ ದಾನಿಗಳ ಪಾತ್ರವೂ ಅತಿಮುಖ್ಯ. ಆ ನಿಟ್ಟಿನಲ್ಲಿ ದಾನಿಗಳು ಮೈಸೂರು ನಗರದವರಾಗಿ ಜಿಲ್ಲೆಯ ಗ್ರಾಮೀಣ ಭಾಗವಾದ ಚಂದಹಳ್ಳಿ ಶಾಲೆಯ ಮಕ್ಕಳಿಗೆ ಇಂದು ಇಷ್ಟೊಂದು ಮೂಲಸೌಕರ್ಯ ಒದಗಿಸುತ್ತಿರುವುದು ಗ್ರಾಮೀಣ ವಿದ್ಯಾರ್ಥಿಗಳ ಮೇಲಿನ ಅವರ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಇತರ ಶಾಲೆಗಳಿಗಿಂತ ಹೆಚ್ಚು ಪರಿಣತಿ ಹೊಂದಿರುವ ನುರಿತ ಶಿಕ್ಷಕರು ಇದ್ದಾರೆ. ಆದರೆ, ಪಾಲಕರು ಪ್ರತಿಷ್ಠೆಯ ಪ್ರಶ್ನೆಗಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳು ಇಂದು ಅತ್ಯುತ್ತಮ ಸಾಧನೆ ಮಾಡಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕುತ್ತಿದ್ದಾರೆ. ಸರ್ಕಾರ, ಶಿಕ್ಷಕರು ಜತೆಗೂಡಿ ಇಂತಹ ಸಮಾಜಮುಖಿ ಸಂಘಟನೆಗಳು, ನಿಸ್ವಾರ್ಥ ಸಮಾಜ ಸೇವಕರು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಇಂತಹ ಮೂಲ ಸೌಕರ್ಯಗಳನ್ನು ಒದಗಿಸುತ್ತಿರುವುದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದಂತಾಗುತ್ತದೆ ಎಂದು ಹೇಳಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿಯೂ ಜನಸ್ಪಂದನ ಟ್ರಸ್ಟ್ ವತಿಯಿಂದ ಶಾಲಾ ಬ್ಯಾಂಡ್ ಸೆಟ್, ಧ್ವನಿವರ್ಧಕ ವಿತರಿಸಲಾಗಿತ್ತು. ಈ ವೇಳೆ ಮೈಸೂರಿನ ಸಮಾಜ ಸೇವಕ ಅಶೋಕಪುರಂನ ಜೋಗಿ ಮಹೇಶ್, ರಮೇಶ್, ಮಂಜುನಾಥ್, ಹರವೆ ಸಿದ್ದು, ನಿವೃತ್ತ ಇಂಜಿನಿಯರ್ ನಾಗರಾಜು, ಪಾಳ್ಯ ಗಿರೀಶ್, ನಿವೃತ್ತ ಮುಖ್ಯ ಶಿಕ್ಷಕ ಎಂ.ಕೊಂಗಯ್ಯ, ಶಾಲೆಯ ಮುಖ್ಯಶಿಕ್ಷಕ ಸೂರ್ಯ ಕುಮಾರ್, ಜಯರಾಮ್, ಎಸ್.ಜ್ಯೋತಿ , ಗೀತಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಾದಲಾಂಬಿಕೆ, ಉಪಾಧ್ಯಕ್ಷ ನಂಜಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net