

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜನಸಾಮಾನ್ಯರು ತಾಲೂಕು ಕಚೇರಿಗೆ ಅಲೆದಾಡುವುದಕ್ಕಿಂತ ಅಧಿಕಾರಿಗಳು ಗ್ರಾಮಕ್ಕೆ ಬಂದಲ್ಲಿ ಅನುಕೂಲವಾದೀತು ಎಂಬ ಉದ್ದೇಶದಿಂದ ಜನಸ್ಪಂದನೆ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಇಂತಹ ಜನಪರ ಕಾರ್ಯಕ್ರಮ ನಡೆಯುತ್ತಿದೆ. ಇಂದು ನಡೆಯುತ್ತಿರುವುದು 10 ನೇ ಕಾರ್ಯಕ್ರಮ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಶಿರ್ಲಾಲು ಗ್ರಾಪಂ ಸಭಾಭವನದಲ್ಲಿ ಮಂಗಳವಾರ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಳಿಕ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾಮೂಹಿಕ ಸಮಸ್ಯೆಗಳ ಬಗ್ಗೆ ಗಮನ ಕೊಡಲಾಯಿತು. ಶಿರ್ಲಾಲಿನ 89/1 ಸರ್ವೇ ನಂ.ನಲ್ಲಿ 52 ಮನೆಗಳಿದ್ದು, 94ಸಿ ಸಿಗಲು ಪರದಾಡುವಂತಾಗಿದೆ. ಇದು ಅರಣ್ಯ ಎಂದು ಗುರುತಿಸಲಾಗುತ್ತಿದೆ. ಹೀಗಾಗಿ ಇಲ್ಲಿ ಜಂಟಿ ಸರ್ವೇ ಆಗಬೇಕು ಎಂದು ತಾರಾನಾಥ ಗೌಡ ಒತ್ತಾಯಿಸಿದರು. ಇದಕ್ಕುತ್ತರಿಸಿದ ಶಾಸಕರು ಹಿಂದಿನ ಬಿಜೆಪಿ ಸರ್ಕಾರ ಸಮಸ್ಯೆಯನ್ನು ನಿವಾರಿಸುವ ಹಂತಕ್ಕೆ ಬಂದಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಮಸ್ಯೆ ತೀವ್ರವಾಗಿದೆ. ರೆಖ್ಯಾದಲ್ಲೂ ಸಮಸ್ಯೆ ಇತ್ತು. ಅಲ್ಲಿ ಜಂಟಿ ಸರ್ವೇ ಆಗಿದ್ದರೂ ಸಮಸ್ಯೆ ಹಾಗೆಯೇ ಇದೆ. ಸಚಿವ ಈಶ್ವರ ಖಂಡ್ರೆ ಸ್ಪಂದಿಸದೇ ಇರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಗುರಿಮಜಲುನಿಂದ ಕೈತಂಡ ಎಂಬಲ್ಲಿನವರೆಗಿನ ಕಾಂಕ್ರೀಟ್ ರಸ್ತೆಯನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಿಸದೇ ಇರುವುದಿಂದ ಸಂಚಾರಕ್ಕೆ ಅಯೋಗ್ಯವಾಗುತ್ತಿದೆ ಎಂದು ಮಾಹಿತಿ ನೀಡಿದಾಗ ಇಂಜಿನಿಯರ್ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಗಮನಿಸಿದ ಶಾಸಕರು ರಸ್ತೆ ಸರಿಯಾಗಿ ಮಾಡಿ ಎಂದು ತಾಕೀತು ಮಾಡಿದರು.
ಶಿರ್ಲಾಲಿನ ಡಿಸಿ ಮನ್ನಾ ಜಾಗದಲ್ಲಿ ಕಟ್ಟಡಗಳು ತಲೆಯೆತ್ತುತ್ತಿರುವ ಬಗ್ಗೆ ಗ್ರಾಮಸ್ಥರು ಅಸಹನೆ ವ್ಯಕ್ತಪಡಿಸಿದಾಗ ತಹಸೀಲ್ದಾರ್ ಪೃಥ್ವಿ ಸಾನಿಕಂ ಡಿಸಿ ಮನ್ನಾ ಜಾಗದ ಬಗ್ಗೆ ಯಾವುದೇ ನಿರ್ದೇಶನ ಸರ್ಕಾರದಿಂದ ಇದುವರೆಗೆ ಬಂದಿಲ್ಲ ಎಂದರು.
ಪಿಡಿಒ ಬಗ್ಗೆ ಅಸಮಾಧಾನ ಕೇಳಿ ಬಂತಲ್ಲದೆ ಅವರನ್ನು ವರ್ಗಾಯಿಸಬೇಕು ಎಂಬ ಕೂಗು ಸಭೆಯಲ್ಲಿ ಕೇಳಿಬಂತು. ಇದಕ್ಕುತ್ತರಿಸಿದ ತಾಪಂ ಇಒ ಭವಾನಿ ಶಂಕರ್, ಪಿಡಿಒ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಬರೆಯಲಾಗಿದೆ ಎಂದರು. ಪರಂಬೋಕು ಜಾಗದಲ್ಲಿ ಕೃಷಿ ಆಗಿದೆ ಎಂದು ಗ್ರಾಮಸ್ಥರೊಬ್ಬರು ದೂರಿದಾಗ ಮುಂದಿನ ವಾರ ಗ್ರಾಮಕ್ಕೆ ಭೇಟಿ ನೀಡಲಿದ್ದು ಅಂದು ಪರಿಶೀಲಿಸುತ್ತೇನೆ ಎಂದು ತಹಸೀಲ್ದಾರ್ ತಿಳಿಸಿದರು.
ಪಂಚಾಯಿತಿ ಅಧ್ಯಕ್ಷ ಉಷಾ ಉಪಾಧ್ಯಕ್ಷ ಸೋಮನಾಥ ಬಂಗೇರ, ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಧೀರ್ ಸುವರ್ಣ ಮತ್ತಿತರರಿದ್ದರು. ಇ.ಒ. ಭವಾನಿ ಶಂಕರ್ ಸ್ವಾಗತಿಸಿದರು. ಯೋಗೀಶ್ ನಿರೂಪಿಸಿದರು.
ಮರಳು - ಕಲ್ಲಿನ ಅಭಾವದಿಂದ ನಿರುದ್ಯೋಗ
ಶಿರ್ಲಾಲಿನಲ್ಲಿ ಮರಳು ಮತ್ತು ಕಲ್ಲಿನ ಅಭಾವದಿಂದಾಗಿ ಸುಮಾರು 35ರಷ್ಟು ಮಂದಿ ಯಾವುದೇ ಉದ್ಯೋಗವಿಲ್ಲದೆ ಇದ್ದಾರೆ. ಹೀಗಾದರೆ ಹೇಗೆ ಎಂದು ಅವಲತ್ತುಕೊಂಡಾಗ ಶಾಸಕರು ಮೇಸಿಗಳಿಗೆ ಮಾತ್ರವಲ್ಲ ಹೋಟೇಲ್ ವ್ಯಾಪಾರಕ್ಕೂ ತಾಪತ್ರಯವಾಗಿದೆ. ಈ ಬಗ್ಗೆ ಸಾಕಷ್ಟು ಪ್ರತಿಭಟನೆ ನಡೆದಿದೆ ಎಂದ ಅವರು ಗ್ರಾಮೀಣ ರಸ್ತೆಗಳಿಗೆ ಚರಳ್ ಹಾಕುವುದರ ಬಗ್ಗೆ ಅನುಮತಿ ಕೇಳುವ ನಿರ್ಣಯಕ್ಕೆ ಬಂದು ಜಿಲ್ಲಾಡಳಿತಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.
ಜಲಜೀವನ್ ಮಿಷನ್ ಕಾಮಗಾರಿ ಅಪೂರ್ಣ
ಜಲ ಜೀವನ್ ಮಿಷನ್ ಕಾಮಗಾರಿ ಅರ್ಧದಲ್ಲೇ ನಿಂತಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮನೆಗಳಿಗೆ ಸಂಪರ್ಕ ಬಂದಿದೆ. ಆದರೆ ನೀರಿಲ್ಲ. ಕೆಲವೆಡೆ ಪೈಪ್ ಒಡೆದಿದೆ ಎಂದಾಗ ಹದಿನೈದು ದಿನಗಳೊಳಗೆ ಸರಿಪಡಿಸುವಂತೆ ಶಾಸಕರು ಎಇಇ ಅವರಿಗೆ ತಾಕೀತು ಮಾಡಿದರು. ಆಗದಿದ್ದರೆ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಹಾಕುವಂತೆ ಸೂಚಿಸಿದರು. 9/11 ಮಾಡುವುದು ಯೋಜನಾ ಪ್ರಾಧಿಕಾರ. ಈಗ ಗ್ರಾಮ ಮಟ್ಟದಲ್ಲಿ ಆಗುವುದಿಲ್ಲ. ಇದರ ಬಗ್ಗೆಯೂ ರಾಜ್ಯದ ಸಚಿವರಲ್ಲಿ ಸಮಸ್ಯೆ ವಿವರಿಸಿದ್ದೇನೆ ಎಂದರು.
ಮಂಗಗಳ ಸೆರೆ ಪಂಚಾಯಿತಿ ಕೆಲಸ!
ಕೃಷಿಗೆ ಮಂಗ, ನವಿಲು, ಹಂದಿ, ಆನೆ ಇತ್ಯಾದಿ ಹಾವಳಿ ಬಗ್ಗೆ ರಾಮಣ್ಣ ಸಾಲ್ಯಾನ್ ವಿವರಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿ ಮಂಗಗಳನ್ನು ಹಿಡಿಯುವುದು ಪಂಚಾಯಿತಿ ಕೆಲಸ ಎಂದಾಗ ಸಭೆ ನಗೆಗಡಲಲ್ಲಿ ತೇಳಿತು. ಈ ಬಗ್ಗೆ ಮಾತನಾಡಿದ ಶಾಸಕರು ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರದಂತೆ ತಡೆಯುವುದು ಅರಣ್ಯ ಇಲಾಖೆಯ ಕಾರ್ಯ. ಇದು ಪಂಚಾಯಿತಿಯದ್ದಲ್ಲ. ಹಂದಿ ಹೊಡೆಯಲು ಅನುಮತಿ ನೀಡಿ ಎಂದು ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಅಂದು ನಾನು ವಿಧಾನಸಭೆಯಲ್ಲಿ ಆನೆಯನ್ನು ಕೊಲ್ಲಲು ಅನುಮತಿ ನೀಡಿ ಎಂಬ ಅರ್ಥದಲ್ಲಿ ಮಾತನಾಡಿದ್ದೆ. ಅದಕ್ಕೆ ನನ್ನನ್ನು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು. ಈಗ ಜನರಿಗೆ ಅರ್ಥವಾಗಿರಬಹುದು. ಸೌತಡ್ಕದಲ್ಲಿ ಆನೆ ದಾಳಿಯಿಂದಾಗಿ ಓರ್ವನ ಪ್ರಾಣವೇ ಹೋಗಿದೆ. ನೆರಿಯ, ತೋಟತ್ತಾಡಿ, ಚಾರ್ಮಾಡಿ, ಕಕ್ಕಿಂಜೆ, ಮುಂಡಾಜೆ ಭಾಗದಲ್ಲಿ ಆನೆಗಳ ಉಪಟಳದಿಂದಾಗಿ ಕೃಷಿಕರು ಎಷ್ಟು ಹಾನಿಗೊಳಗಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಹರೀಶ್ ಪೂಂಜ ಶಾಸಕ