ಆರೇಲ್ತಡಿ ದೈವಸ್ಥಾನಕ್ಕೆ ಜನಾರ್ದನ ರೆಡ್ಡಿ ಭೇಟಿ : ಇರುವೆರ್ ಉಳ್ಳಾಕುಲು-ಕೆಡೆಂಜೋಡಿತ್ತಾಯಿ ವಿಶೇಷ ಸೇವೆ

05
Published on

ಕಡಬ: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು.

ಜೈಲಿನಿಂದ ಬಿಡುಗಡೆಯ ಒಂದೂವರೆ ತಿಂಗಳ ಬಳಿಕ ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸೇವೆ ಸಲ್ಲಿಸಿದರು.

ದೈವಸ್ಥಾನದ ಆವರಣದಲ್ಲಿ ನೂತನ ಸಭಾಭವನಕ್ಕೆ ಜನಾರ್ದನ ರೆಡ್ಡಿ ಶಿಲಾನ್ಯಾಸ ನೆರವೇರಿಸಿದರು. ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿದರು. ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್., ನಳಿನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಪ್ರಶಾಂತ್ ಕೆಡೆಂಜಿ, ಆರೇಲ್ತಡಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ, ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ ಉಪಸ್ಥಿತರಿದ್ದರು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿದರು. ಗೌರವ ಸಲಹೆಗಾರ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು. ಕೋಶಾಧಿಕಾರಿ ರಾಜೇಶ್ ಇಡ್ಯಾಡಿ ವಂದಿಸಿದರು.

ಅಭಯ ನೀಡಿದ್ದ ದೈವ

ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಸ್ಥಾನಕ್ಕೆ ಕಳೆದ ಮೇ 13ರಂದು ದೈವಸ್ಥಾನ ಬ್ರಹಕಲಶೋತ್ಸವಕ್ಕೆ ಆಗಮಿಸಬೇಕಿದ್ದ ರೆಡ್ಡಿ ಅಂದು ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿ ಆಗಮಿಸಲು ಸಾಧ್ಯವಾಗಿರಲಿಲ್ಲ. ಮೇ 13ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲಿನಿಂದ ಬಿಡುಗಡೆಗೆ ಮೊರೆ ಇಟ್ಟಿದ್ದರು. ಇಂದಿನಿಂದ ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ಕೆಡೆಂಜೋಡಿತ್ತಾಯಿ ದೈವ ರೆಡ್ಡಿಗೆ ಜೈಲಿನಿಂದ ಬಿಡುಗಡೆಯಾಗುವ ಅಭಯ ನೀಡಿತ್ತು. ದೈವದ ಅಭಯದಂತೆ ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿ ಬಿಡುಗಡೆಯಾಗಿದ್ದರು. ಹಾಗಾಗಿ ಜು.16ರಂದು ಸಂಕ್ರಮಣ ದಿನದಂದು ಸವಣೂರಿನಲ್ಲಿರುವ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು.

ಸೇವಾರೂಪದಲ್ಲಿ ನೇಮ ನೀಡುವ ಇಂಗಿತ

ಮುಂದಿನ ವರ್ಷದ ನೇಮವನ್ನು ನಾನು ಸೇವಾರೂಪದಲ್ಲಿ ಮಾಡುತ್ತೇನೆ. ನಾವು ಕುಟುಂಬ ಸಮೇತರಾಗಿ ಬಂದು ದೈವದ ಪ್ರಸಾದ ಸ್ವೀಕರಿಸುತ್ತೇವೆ. ನೂತನವಾಗಿ ನಿರ್ಮಾಣವಾಗುವ ಸಭಾಭವನದ ವೆಚ್ಚವನ್ನು ಭರಿಸುವುದಾಗಿ ಹೇಳಿದರು. ಕ್ಷೇತ್ರಕ್ಕೆ 15 ಲಕ್ಷ ರೂ. ದೇಣಿಗೆ ನೀಡಿದರು.

ನನ್ನನ್ನು ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿದ್ದರು. ಆದರೆ ಜೈಲಿಗೆ ಹೋಗುವಂತಾಯಿತು. ಈ ವೇಳೆ ಇಲ್ಲಿನ ಜನರು ನನ್ನ ಬಿಡುಗಡೆಗಾಗಿ ದೈವದ ಬಳಿ ಪ್ರಾರ್ಥಿಸಿದ್ದರು. ದೈವದ ನುಡಿಯಂತೆ ನಾನು ಜೈಲಿನಿಂದ ಬಿಡುಗಡೆಯಾದೆ. ಜೈಲುವಾಸವೂ ಭಗವಂತನ ಪರೀಕ್ಷೆ. ಇಲ್ಲಿನ ದೈವದ ಕಾರಣಿಕ ಬಣ್ಣಿಸಲು ಪದಗಳಿಲ್ಲ. ಗಾಲಿ ಜನಾರ್ದನ ರೆಡ್ಡಿ, ಗಂಗಾವತಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net