ಪ್ರಯಾಣಿಕರ ಸುರಕ್ಷತೆಗೆ ಕ್ರಮ : ಜನಸಂವಾದ ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳಿಂದ ಭರವಸೆ

New Project (39)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕೇಂದ್ರ ಸರ್ಕಾರದ ಅಮೃತ್ ಭಾರತ್ ಯೋಜನೆಯಡಿ ಬಿ.ಸಿ.ರೋಡಿನ ಬಂಟ್ವಾಳ ರೈಲು ನಿಲ್ದಾಣ ಅಭಿವೃದ್ಧಿಗೊಂಡಿದ್ದು, ಶೇ.90ರಷ್ಟು ಕೆಲಸಗಳು ಪೂರ್ಣಗೊಂಡಿವೆ. ರೈಲು ನಿಲ್ದಾಣ ಉದ್ಘಾಟನಾ ಕಾರ್ಯಕ್ಕೆ ಮುನ್ನ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವುದರ ಜತೆಗೆ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸುವ ಉದ್ದೇಶದಿಂದ ರೈಲ್ವೆ ಇಲಾಖೆಯ ಡಿವಿಷನಲ್ ಮೆಡಿಕಲ್ ಆಫೀಸರ್ ಡಾ.ರೆಸಿನ್ ಪಿ.ಕಬೀರ್ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಜನಸಂವಾದ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನ ರೈಲು ನಿಲ್ದಾಣದಲ್ಲಿ ನಡೆಯಿತು.

ಈ ಸಂದರ್ಭ ಹಲವಾರು ಬೇಡಿಕೆಗಳನ್ನು, ರೈಲು ನಿಲ್ದಾಣದ ಸಮಸ್ಯೆಗಳನ್ನು ಸಾರ್ವಜನಿಕರು ಹಾಗೂ ರೈಲ್ವೆ ಪ್ರಯಾಣಿಕರು ಅಧಿಕಾರಿಗಳ ಮುಂದಿಟ್ಟರು.

ಬೀದಿನಾಯಿ ಕಾಟ: ರೈಲು ನಿಲ್ದಾಣದಲ್ಲಿ ಬೀದಿನಾಯಿಗಳು ತುಂಬಿಕೊಂಡಿದ್ದು ಕೆಲವು ಪ್ರಯಾಣಿಕರು ರೈಲು ಪ್ಲಾಟ್ ಫಾರಂನಲ್ಲಿಯೇ ಅವುಗಳಿಗೆ ತಿನ್ನಲು ಬಿಸ್ಕೆಟ್‌ಗಳನ್ನು ಹಾಕುವುದರಿಂದ ಅವುಗಳು ಅಲ್ಲೇ ಸುತ್ತಾಡಿಕೊಂಡಿರುತ್ತವೆ. ಬೀದಿನಾಯಿಗಳು ಪ್ಲಾಟ್ ಫಾರಂ ಒಳ ಬರದಂತೆ ಎಚ್ಚರ ವಹಿಸಬೇಕು ಎಂದು ರೈಲ್ವೆ ಅಭಿವೃದ್ಧಿ ಸಮಿತಿ ಸದಸ್ಯೆ ಸುಷ್ಮಾ ಚರಣ್ ಅಧಿಕಾರಿಗಳ ಗಮನಕ್ಕೆ ತಂದರು. ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಸ್ವಚ್ಛತಾ ಸಿಬ್ಬಂದಿ ಅವಶ್ಯಕತೆ ಇದ್ದು, ನೇಮಿಸುವಂತೆ ತಿಳಿಸಿದರು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಿಸಿ ಟಿವಿ ಅಳವಡಿಸುವಂತೆ ತಿಳಿಸಿದಾಗ 22 ಸಿಸಿ ಟಿವಿಗಳನ್ನು ರೈಲು ನಿಲ್ದಾಣದಲ್ಲಿ ತಕ್ಷಣ ಅಳವಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ರೈಲು ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸುವಂತೆ ಪ್ರಯಾಣಿಕ ಹೊನ್ನಪ್ಪ ಕುಂದರ್ ಆಗ್ರಹಿಸಿದರು. ಟಿಕೆಟ್ ಚೆಕ್ಕಿಂಗ್ ಸ್ಟೇಷನ್ ಸ್ಟಾಪ್ ಹಾಗೂ ಲಗ್ಗೇಜ್ ಡಿಕ್ಟೇರ್ ನೇಮಕ ಮಾಡುವಂತೆ ಪ್ರಯಾಣಿಕರು ಅಧಿಕಾರಿಗಳ ಗಮನಕ್ಕೆ ತಂದರು.

ದಾರಿ ಸರಿಪಡಿಸಿ: ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೈಕುಂಜೆ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಲಾಯಿತು. ರೈಲ್ವೆ ಸಿಬ್ಬಂದಿ ವಸತಿಗೃಹಕ್ಕೆ ಹೋಗುವ ದಾರಿ ಸರಿಪಡಿಸುವಂತೆ ತಿಳಿಸಲಾಯಿತು.

ಮುಖ್ಯ ಟಿಕೆಟ್ ಇನ್‌ಸ್ಪೆಕ್ಟರ್ ವಿಠಲ್ ನಾಯ್ಕ, ರೈಲ್ವೆ ಅಭಿವೃದ್ಧಿ ಸಮಿತಿ ಸದಸ್ಯರಾದ ಸುಷ್ಮಾ ಚರಣ್, ಕೇಶವ ದೈಪಲ, ಪ್ರಣಮ್ ರಾಜ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.

ಅಶುದ್ಧ ನೀರು ಪೂರೈಕೆ

ರೈಲು ನಿಲ್ದಾಣದ ನಳ್ಳಿಗಳಲ್ಲಿ ಪೂರೈಕೆಯಾಗುವ ನೀರು ಶುದ್ಧವಾಗಿಲ್ಲ ಎಂದು ಪ್ರಯಾಣಿಕರೊಬ್ಬರು ದೂರಿದರು. ಇಲಾಖೆ ಇಂಜಿನಿಯರ್ ಪ್ರತಿಕ್ರಿಯಿಸಿ, ನೀರು ಪೂರೈಕೆಯಾಗುವ ಟ್ಯಾಂಕ್ ಸ್ವಚ್ಛವಾಗಿಲ್ಲ. ತಕ್ಷಣ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಕೆಲವೊಮ್ಮೆ ಟ್ಯಾಂಕ್‌ನಲ್ಲಿ ನೀರೇ ಇರುವುದಿಲ್ಲ ಎಂದು ಸ್ಥಳೀಯರೊಬ್ಬರು ಅಧಿಕಾರಿಗಳ ಗಮನಕ್ಕೆ ತಂದಿದ್ದು, ದಿನಕ್ಕೆ ಎರಡು ಹೊತ್ತು ಟ್ಯಾಂಕ್‌ಗೆ ನೀರು ತುಂಬಿಸಲು ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದರು.

ವಿಶ್ರಾಂತಿ ಕೊಠಡಿಗೆ ಆಗ್ರಹ

ಮಧ್ಯ ರಾತ್ರಿ 2-3 ಗಂಟೆಗೆ ರೈಲು ನಿಲ್ದಾಣಕ್ಕೆ ಬರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ದೂರದ ಊರಿಗೆ ತೆರಳುವ ಮಹಿಳಾ ಪ್ರಯಾಣಿಕರಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಅವರ ಮನೆಗಳಿಗೆ ಹೋಗಲು ಅಸಾಧ್ಯ. ಅಂತಹ ಪ್ರಯಾಣಿಕರು ಬೆಳಗ್ಗಿನವರೆಗೆ ಉಳಿದುಕೊಳ್ಳಲು ವಿಶ್ರಾಂತಿ ಗೃಹ ನಿರ್ಮಿಸಿಕೊಡುವಂತೆ ಪ್ರಯಾಣಿಕರೊಬ್ಬರು ಆಗ್ರಹಿಸಿದರು. ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಲಾಯಿತು. ರೈಲ್ವೆ ನಿಲ್ದಾಣ ಬಳಿ ಇರುವ ಕಸವನ್ನು ಪುರಸಭೆಯವರು ಸ್ವಚ್ಛಗೊಳಿಸುವುದಿಲ್ಲ ಎಂಬ ದೂರು ಕೇಳಿಬಂತು.

ವಂದೇ ಭಾರತ್ ಪ್ರಸ್ತಾವನೆ

ವಂದೇ ಭಾರತ್ ರೈಲು ವ್ಯವಸ್ಥೆಯನ್ನು ಈ ಭಾಗಕ್ಕೂ ವಿಸ್ತರಿಸುವಂತೆ ಮನವಿ ಮಾಡಿದಾಗ ವಯಾ ಅರಸಿಕೆರೆ ಮೂಲಕ ಮಂಗಳೂರು ಬೆಂಗಳೂರು ವಂದೇ ಭಾರತ್‌ಗೆ ಪ್ರಸ್ತಾವನೆ ಇದೆ. ವಿದ್ಯುದ್ದೀಕರಣ ವ್ಯವಸ್ಥೆ ಪೂರ್ಣಗೊಂಡ ಕೂಡಲೇ ಅದು ಜಾರಿಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸರ್ಕಾರದ ಆದೇಶ ಪಾಲನೆ

ನಿಲ್ದಾಣದ ಪ್ಲಾಟ್ ಫಾರಂ ಮೇಲೆ ಸಾರ್ವಜನಿಕರಿಗೆ ವಾಕಿಂಗ್ ಮಾಡಲು ಬಿಡುವುದಿಲ್ಲ. ಪ್ಲಾಟ್‌ಫಾರಂ ಟಿಕೆಟ್ ಇಲ್ಲದೆ ಒಳ ಪ್ರವೇಶ ಇಲ್ಲ. ಇಲಾಖೆಯ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಇದಕ್ಕೆ ಜನಪ್ರತಿನಿಧಿಗಳ ಮೂಲಕ ಒತ್ತಡ ಹಾಕುವುದು ಸರಿಯಲ್ಲ. ಪ್ರಯಾಣಿಕರು ಇದನ್ನು ಅರ್ಥಮಾಡಿಕೊಂಡು ಸಹಕರಿಸಬೇಕು ಎಂದು ರೈಲ್ವೆ ಪೊಲೀಸರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net