

ಕೈಲಾಂಚ : ಹೋಬಳಿಯ ಕೈಲಾಂಚ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ರೈತರೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.
ಚಿಕ್ಕಬೋರಯ್ಯ ಗಾಯಗೊಂಡಿದ್ದು, ರಾಮನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎಂದಿನಂತೆ ಚಿಕ್ಕಬೋರಯ್ಯ ಬೆಳಗ್ಗೆ 5 ಗಂಟೆ ಎದ್ದು ದನದ ಕೊಟ್ಟಿಗೆಯಿಂದ ಹಸುಗಳನ್ನು ಹೊರಗೆ ಕಟ್ಟಬೇಕಾದರೆ ಎರಡು ಮರಿ, ತಾಯಿ ಕರಡಿ ಚಿಕ್ಕಬೋರಯ್ಯನ ಮೇಲೆ ಎರಗಿವೆ.
ದಾಳಿಯಿಂದ ತಪ್ಪಿಸಿಕೊಳ್ಳಲು ಜೋರಾಗಿ ಕಿರುಚಾಡಿದ್ದಾರೆ. ಈ ವೇಳೆ ಆತನ ಪುತ್ರ ಹಾಗೂ ಅಕ್ಕಪಕ್ಕದವರು ಬಂದು ಕಿರುಚಾಡಿದ್ದರಿಂದ ಕರಡಿ ಓಡಿಹೋಗಿದೆ. ಆದರೂ, ತಲೆ ಭಾಗಕ್ಕೆ ತೀವ್ರ ಗಾಯವಾಗಿದೆ.
ವಿಷಯ ತಿಳಿದು ಅರಣ್ಯ ಇಲಾಖೆ ಡಿಎಫ್‌ಒ ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಮನ್ಸೂರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಚಿಕ್ಕಬೋರಯ್ಯ ಅವರ ಆರೋಗ್ಯ ವಿಚಾರಿಸಿದರು. ಗಾಯಾಳುವಿನ ಚಿಕಿತ್ಸಾ ವೆಚ್ಚವನ್ನು ಇಲಾಖೆ ಭರಿಸುತ್ತದೆೆ ಎಂದು ಭರವಸೆ ನೀಡಿದರು.
ಕರೆಂಟ್ ಇರಲಿಲ್ಲ
ಮೂರ‌್ನಾಲ್ಕು ದಿನಗಳಿಂದ ಬೆಳಗಿನ ವೇಳೆಯಲ್ಲೇ ಕರೆಂಟ್ ತೆಗೆಯಲಾಗುತ್ತಿದೆ. ಇದರಿಂದ ಮುಂಜಾನೆ ಹಾಲು ಕರೆಯಲು ಕತ್ತಲಲ್ಲಿ ಓಡಾಡಬೇಕು. ಕತ್ತಲಿನಲ್ಲಿ ಹೋದ ಕಾರಣ ಕರಡಿಗಳು ಮೇಲೆರಗಿವೆೆ. ಕರಡಿಗಳು ಮನೆ ಹತ್ತಿರವೇ ಬರುತ್ತಿರುವ ಕಾರಣ ಭಯ ತರಿಸಿದೆ ಎನ್ನುತ್ತಾರೆ ಚಿಕ್ಕಬೋರಯ್ಯ ಪುತ್ರ ಸಂತೋಷ್.