

ಸರಗೂರು: ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕುಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಗತಿ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಯ್ಯನ ಮುದ್ದಯನ ಹುಂಡಿಯಲ್ಲಿ ಕಾಮಗಾರಿಗಳನ್ನು ಪರಿಶೀಲಿಸಿ, ಈಗಾಗಲೇ ಮೀಟರ್ ಅಳವಡಿಸಿನಲ್ಲಿ ಸಂಪರ್ಕ ಪೂರ್ಣಗೊಂಡು ನೀರನ್ನು ಪೂರೈಸುತ್ತಿರುವ ಕಡೆ ಜನರಿಗೆ ಮೀಟರ್ ರೀಡಿಂಗ್ ಪ್ರಾರಂಭಿಸಿ ಅರಿವು ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಅಣ್ಣೂರಿನ ಭುಕ್ತನ ಮಾಳ, ಬೀಚನಹಳ್ಳಿ ಅಂತರಸಂತೆ ಹೊನ್ನೂರು ಕುಪ್ಪೆ ಹಾಗೂ ಅಂತರಸಂತೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗನ್ನು ಪರಿಶೀಲಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ, ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಬಳಿಕ ಸರಗೂರು ತಾಲೂಕಿನ ಬಿದರಹಳ್ಳಿಯ ನಂಜನಾಥಪುರ ಹಾಗೂ ಬಿ.ಮಟಕೆರೆಯ ಕೂಡಗಿ ಹಾಡಿಗೆ ಭೇಟಿ ನೀಡಿ ಕಾಮಗಾರಿಗಳ ಪರಿವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆ ಮನೆ ಗಂಗೆ ಕಾರ್ಯಕ್ರಮದ ಮೂಲಕ ಪೂರೈಸಲಾಗುತ್ತಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎ.ಎಸ್.ರಂಜಿತ್‌ಕುಮಾರ್, ಎಚ್.ಡಿ.ಕೋಟೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋವಿಂದನಾಯಕ, ಕಿರಿಯ ಕಾರ್ಯಪಾಲಕ ಇಂಜಿನಿಯರ್ ಮೋನಶ್ರೀ, ಕೆ.ಸುನೀಲ್, ನಾಗೇಶ್, ಮೋಹನ್‌ರಾಜ್, ಜಲ ಜೀವನ್ ಮಿಷನ್ ಜಿಲ್ಲಾ ಸಮಾಲೋಚಕ ಚೇತನ್‌ಕುಮಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಿ ಭಾಗ್ಯ, ಗ್ರಾಪಂ ಅಧ್ಯಕ್ಷ ದೇವದಾಸ್, ಸದಸ್ಯ ನಾಗೇಂದ್ರ, ಮಹೇಶ್ ಇದ್ದರು.