

ಬಂಟ್ವಾಳ: ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜಕ್ರಿಬೆಟ್ಟುವಿನಲ್ಲಿ ಸೆ.7ರಿಂದ 11ರವರೆಗೆ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈತಿಳಿಸಿದರು.
ನಿತ್ಯ ಅನ್ನ ಸಂತರ್ಪಣೆ, ಮಹಿಳೆಯರಿಂದ ವಿಶೇಷ ಕುಂಕುಮಾರ್ಚನೆ ಸೇವೆ, ಮಕ್ಕಳು, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ವಿಭಾಗದ ಸ್ಪರ್ಧೆ ನಡೆಯತ್ತವೆ. ಪ್ರತಿದಿನ ಧಾರ್ಮಿಕ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ಉತ್ಸವಕ್ಕೆ ಮೆರುಗು ನೀಡಲಿದೆ.
ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಬಲ್ಯೊಟ್ಟು ಗುರುಕೃಪ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಅಲ್ಲಿಪಾದೆ ಚರ್ಚ್ ಧರ್ಮಗುರು ರಾಬರ್ಟ್ ಡಿಸೋಜ, ಸ್ಪೀಕರ್ ಯು.ಟಿ.ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಭಾಗವಹಿಸಲಿರುವರು.
ನೃತ್ಯ ಪ್ರದರ್ಶನ, ತುಳುನಾಟಕ ಪ್ರದರ್ಶನ, ಜಿಲ್ಲೆಯ ಖ್ಯಾತ ಕಲಾವಿದರಿಂದ ತಾಳ ಮದ್ದಳೆ, ಯಕ್ಷಗಾನ, ಸಂಗೀತ ರಸಮಂಜರಿ, ಪ್ರತಿ ದಿನ ಭಜನಾ ಕಾರ್ಯಕ್ರಮ ನಡೆಯಲಿವೆ. ಕಾರ್ಯಕ್ರಮದ 5ನೇ ದಿನ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ವಿವಿಧ ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದರು.