ಜಯದೇವ ಸಂಸ್ಥೆಗೆ 2ಡಿ ಕಲರ್ ಡಾಪ್ಲರ್ ಎಕೊ ಕಾರ್ಡಿಯೋಗ್ರಾಫಿ ದೇಣಿಗೆ

Jaideva hospital - 1
Published on

ಬೆಂಗಳೂರು: ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ದೇಶಕ್ಕೆ ಮಾದರಿಯಾಗಿದೆ. ಹಾಗಾಗಿ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ತಿಳಿಸಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಐಸಿಐಸಿಐ ಫೌಂಡೇಷನ್ 70 ಲಕ್ಷ ರೂ. ಬೆಲೆಯ 2ಡಿ ಕಲರ್ ಡಾಪ್ಲರ್ ಎಕೊ ಕಾರ್ಡಿಯೋಗ್ರಾಫಿ ಉಪಕರಣವನ್ನು ಜಯದೇವ ಸಂಸ್ಥೆಗೆ ದೇಣಿಗೆಯಾಗಿ ನೀಡಿತು.

ಈ ವೇಳೆ ಮಾತನಾಡಿದ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ, ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದು, ಒತ್ತಡದ ನಡುವೆಯೂ ಸಿಬ್ಬಂದಿ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಸಂಸ್ಥೆಗೆ ನೀಡುತ್ತಿರುವ ವೈದ್ಯಕೀಯ ಉಪಕರಣಗಳು ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿವೆ. ಕಲಬುರಗಿಯಲ್ಲಿ ಸಂಸ್ಥೆಯ ಶಾಖೆ ನಿರ್ಮಾಣವಾಗುತ್ತಿದ್ದು, ಇದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವರದಾನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಯದೇವ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಮಾತನಾಡಿ, ಆಸ್ಪತ್ರೆಯಲ್ಲಿ ನಿತ್ಯ 800-1000 ಜನರಿಗೆ 2ಡಿ ಎಕೊ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ವರ್ಷ ಮೂರು ಲಕ್ಷ ಜನರಿಗೆ 2ಡಿ ಎಕೊ ಪರೀಕ್ಷೆ ನಡೆಸಲಾಗಿದ್ದು, ಇದು ಜಾಗತಿಕ ದಾಖಲೆಯಾಗಿದೆ. ಆಸ್ಪತ್ರೆಗೆ ಬರುವ ಹೃದ್ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ, ದಾನಿಗಳ ನೀಡುವ ವೈದ್ಯಕೀಯ ಸಲಕರಣೆಗಳು ಸದುಪಯೋಗ ಆಗಲಿವೆ. ಬಡ ಹಾಗೂ ನಿರ್ಗತಿಕ ಹೃದ್ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಐಸಿಐಸಿಐ ೌಂಡೇಷನ್ ಮುಖ್ಯಸ್ಥ ಬಿ.ಕೆ. ವೆಂಕಟೇಶ್ ಹಾಗೂ ಆಡಳಿತ ವರ್ಗದವರು ಮತ್ತು ಜಯದೇವ ಸಂಸ್ಥೆಯ ವೈದ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net