ರಾಮ ಮಂದಿರ ವಿರೋಧಿಗಳ ಬಾಯಿಂದಲೇ ಜೈ ಶ್ರೀರಾಮ ಘೋಷಣೆ ! ವಿಪ ಮಾಜಿ ಸದಸ್ಯ ಅರುಣ ಶಹಾಪುರ ವ್ಯಂಗ್ಯ

BJP MEETING SAI VIHAR
ವಿಜಯಪುರದ ಸಾಯಿ ವಿಹಾರದಲ್ಲಿ ಹಮ್ಮಿಕೊಂಡಿದ್ದ ‘ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ’ ಸಭೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಉದ್ಘಾಟಿಸಲಾಯಿತು. ವಿಪ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ ಅಸುರ ಶಕ್ತಿಗಳೇ ಇಂದು ಜೈ ಶ್ರೀರಾಮ ಘೋಷಣೆ ಮೊಳಗಿಸುತ್ತಿವೆ ಎಂದು ವಿಪ ಮಾಜಿ ಸದಸ್ಯ ಅರುಣ ಶಹಾಪುರ ವ್ಯಂಗ್ಯವಾಡಿದರು.

ನಗರದ ಸಾಯಿ ವಿಹಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ’ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವ ಅಸುರ ಶಕ್ತಿಗಳು ರಾಮ ಮಂದಿರ ನಿರ್ಮಾಣ ವಿರೋಧಿಸಿದವೋ, ಕರಸೇವಕರನ್ನು ದಮನಿಸಿದವೋ ಆ ಶಕ್ತಿಗಳೇ ಇಂದು ಶ್ರೀರಾಮನ ಘೋಷಣೆ ಕೂಗುತ್ತಿವೆ. ರಾಮ ನಮಗೂ ದೇವರು ಎನ್ನುತ್ತಿವೆ. ಇದು ಹಿಂದುತ್ವದ ಶಕ್ತಿ ಎಂದರು.

ಯಾವ ಮುಖ್ಯಮಂತ್ರಿ ತಿಲಕ ಹಚ್ಚಿಕೊಳ್ಳಲು ನಿರಾಕರಿಸುತ್ತಿದ್ದರೋ ಅವರು ಸಹ ರಾಮನ ಸ್ಮರಿಸುತ್ತಿದ್ದಾರೆ, ಬನಾಯೇಂಗೆ ಮಂದಿರ ಎಂಬ ಹಾಡನ್ನು ಹಾಡಿದರೆ ಕೇಸು ದಾಖಲಿಸುವ ಪರಿಸ್ಥಿತಿ ಇತ್ತು, ಅಂದು ಆ ರೀತಿ ರಾಮ ಭಕ್ತರನ್ನು ಕಾಡಿದವರೇ ಇಂದು ರಾಮನನ್ನು ನೆನೆಯುತ್ತಿದ್ದಾರೆ ಎಂದರು.
ರಾಮ ಮಂದಿರ ನಿರ್ಮಾಣದ ಮೂಲಕ ಭಾರತ ವಿಶ್ವ ಗುರುವಾಗಿ ಶೀಘ್ರದಲ್ಲಿಯೇ ಅಲಂಕೃತವಾಗಲಿದೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಮಯ ನಿಗದಿಯಲ್ಲೂ ಧರ್ಮದ ಲೇಪನ ಮಾಡಿರುವ ಕಾಂಗ್ರೆಸ್ ಮುಸ್ಲಿಂರ ತುಷ್ಟೀಕರಣ ಪರಾಕಾಷ್ಠೆಗೆ ತಲುಪಿದೆ, ಶುಕ್ರವಾರ ಪ್ರಾರ್ಥನೆಗಾಗಿ ಸಮಯ ಮೀಸಲಿರಿಸಿ ಪರೀಕ್ಷೆಯ ವೇಳಾಪಟ್ಟಿ ನಿಗದಿ ಮಾಡಲು ಧರ್ಮದ ಓಲೈಕೆಯಂತಹ ನೀಚಕೃತ್ಯಕ್ಕೆ ತಲುಪಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಒಂದೇ ಒಂದು ಸಂಸದ ಸ್ಥಾನವನ್ನು ಕಾಂಗ್ರೆಸ್ ಜಯ ಸಾಧಿಸುವುದಿಲ್ಲ, ಎಲ್ಲ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವಿನ ನಗೆ ಬೀರಲಿದೆ ಎಂದರು.
ಕಾಂಗ್ರೆಸ್ ಕಾಲಘಟ್ಟದಲ್ಲಿ ಅಡುಗೆ ಅನಿಲ ಪಡೆಯಲು ಶಿಫಾರಸ್ಸು ಬೇಕಾಗಿತ್ತು, ಈಗ ಕಾಲ ಬದಲಾಗಿದೆ, ಈ ಬಾರಿ ಕಳೆದ ದಾಖಲೆಯನ್ನು ಸಹ ಮುರಿದು ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ಹಿಂದುತ್ವ ಹಾಗೂ ಬಿಜೆಪಿಯನ್ನು ವಿರೋಧಿಸಿದವರೇ ಇಂದು ನಾವು ಹಿಂದು, ನಾವು ಹಿಂದು ಎಂದು ಹೇಳುವಂತಾಗಿದೆ, ಮತಗಳ ಓಲೈಕೆಗಾಗಿ ದೇಗುಲಗಳಿಗೆ ಹೋಗಲು ಸಹ ಅಂಜುತ್ತಿದ್ದವರು ಸಹ ಇಂದು ಗಂಟೆಗಟ್ಟಲೆ ದೇವಾಲಯದ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದರು.

ಬಜೆಟ್ ಅಭಿಪ್ರಾಯ ಹೇಳುವಾಗ ದೇಶವನ್ನೇ ವಿಭಜನೆ ಮಾಡುವ ಹೇಳಿಕೆ ನೀಡುವಷ್ಟು ಹೇಯಕೃತ್ಯಕ್ಕೆ ತೊಡಗಿರುವ ಕಾಂಗ್ರೆಸ್ ನಾಯಕರಿಗೆ ಬೌದ್ಧಿಕ ದಿವಾಳಿಯಾಗಿದೆ ಎಂದು ಲೇವಡಿ ಮಾಡಿದರು.

ಒಂದು ಸಮುದಾಯದವರಿಗೆ ಓಲೈಕೆ ಮಾಡಲು ಪರೀಕ್ಷೆ ಸಮಯ ನಿಗದಿ ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಈ ಹಿಂದೆ ಯುಪಿಎ ಸರ್ಕಾರ ಅವಧಿಯಲ್ಲಿ ಎಲ್ಲಿ ಬಾಂಬ್ ಬೀಳುತ್ತವೆ ಎಂಬ ಭಯ ಇರುತ್ತಿತ್ತು, ಆದರೆ ಈಗ ಯಾವ ಭಯವೂ ಇಲ್ಲದಂತಾಗಿದೆ ಎಂದರು.

ಕಾಂಗ್ರೆಸ್ ಶಾಸಕರೇ ಕಾಂಗ್ರೆಸ್ ಬಗ್ಗೆ ಬೇಸತ್ತಿದ್ದಾರೆ, ಗ್ಯಾರಂಟಿ ಹೊರೆಯಿಂದ ಯಾವ ಅಭಿವೃದ್ಧಿಗೂ ಅನುದಾನ ದೊರಕುತ್ತಿಲ್ಲ, ಹೀಗಾಗಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂದು ಅವರ ಸ್ವ ಪಕ್ಷದ ಶಾಸಕರೇ ಆತಂಕ ಹೊರಹಾಕಿದ್ದಾರೆ, ಲೋಕಸಭೆ ಚುನಾವಣೆವರೆಗೆ ಅವರೆಲ್ಲರೂ ಕಾಯುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಮುಖಂಡರಾದ ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಮಲ್ಲಿಕಾರ್ಜುನ ಜೋಗೂರ, ಬಸವರಾಜ ಬಿರಾದಾರ, ಮಲ್ಲಮ್ಮ ಜೋಗೂರ ಮತ್ತಿತರರಿದ್ದರು. ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net