ಆನೆ ಕಾಲು ರೋಗ ಮುಕ್ತಕ್ಕೆ ಸಹಕಾರ ಅಗತ್ಯ

mg
Published on

ಮಾಗಡಿ: ಆನೆ ಕಾಲು ರೋಗ ಮುಕ್ತಗೊಳಿಸಲು ಸಹಕರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಸಿ. ಚಂದ್ರಶೇಖರಯ್ಯ ಮನವಿ ಮಾಡಿದರು.

ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆನೆಕಾಲು ರೋಗದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆನೆ ಕಾಲು ಸಾಂಕ್ರಾಮಿಕ ರೋಗವಾಗಿದ್ದು, ಕ್ಯೂಲೆಕ್ಸ್ ಎಂಬ ಸೊಳ್ಳೆಯಿಂದ ರೋಗ ಹರಡುತ್ತದೆ. ಇದೊಂದು ಭಯಾನಕ ರೋಗವಾಗಿದ್ದು, ಪ್ರಾರಂಭದಲ್ಲಿ ಪರೀಕ್ಷಿಸಿಕೊಂಡು ಪ್ರಕರಣ ದೃಢಪಟ್ಟರೆ 14 ದಿನ ಸೂಕ್ತ ಚಿಕಿತ್ಸೆ ನೀಡಿ ರೋಗ ಗುಣಪಡಿಸಲಾಗುವುದು. ಒಮ್ಮೆ ರೋಗ ಉಲ್ಬಣಗೊಂಡರೆ ಜೀವನವಿಡೀ ನರಳಬೇಕಾಗುತ್ತದೆ. ಆದ್ದರಿಂದ ರಕ್ತ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜನತೆ ಈ ಬಗ್ಗೆ ಯಾವುದೇ ಆತಂಕ, ಭಯ ಪಡದೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯವಂತವರಾಗುವಂತೆ ಕರೆ ನೀಡಿದರು.

ಗ್ರಾಮದಲ್ಲಿ 20 ವರ್ಷ ಮೇಲ್ಪಟ್ಟ 300 ಮಂದಿಗೆ ರಕ್ತ ಪರೀಕ್ಷೆ ಮಾಡಿ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ನಾಗರಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಸೊಳ್ಳೆಗಳ ನಿರ್ಮೂಲನೆಗೆ ಎಚ್ಚರವಹಿಸಬೇಕು. ಸೊಳ್ಳೆಗಳಿಂದ ಜನರು ರಕ್ಷಣೆ ಪಡೆಯಲು ಕಡ್ಡಾಯವಾಗಿ ಸೊಳ್ಳೆ ಪರದ ಉಪಯೋಗಿಸುವುದು, ಮನೆಯ ಕಿಟಕಿಗಳಿಗೆ ಜಾಲರ ಅಳವಡಿಸಿ ಮುಂಜಾಗೃತ ಕ್ರಮ ಕೈಗೊಳ್ಳಿ. ಹಾಗೂ ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವೃದ್ದರು ಮೈತುಂಬ ಬಟ್ಟೆಧರಿಸಿ ಸೊಳ್ಳೆಗಳಿಂದ ರಕ್ಷಣೆ ಪಡೆಯುವಂತೆ ತಿಳಿಸಿದರು.

ಕಳೆದ ಬಾರಿ ಹೊರರಾಜ್ಯಗಳಿಂದ ಬಂದ ಇಬ್ಬರು ವಲಸೆ ಕಾರ್ಮಿಕರಿಗೆ ರೋಗ ಪತ್ತೆಯಾಗಿದ್ದು, ಅವರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಇತ್ತೀಚೆಗೆ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಕೇಂದ್ರ, ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಲಭ್ಯವಿದ್ದು ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಶಿವಕುಮಾರ್, ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿ ಸುಜಾತಾ, ಇದಾಯತ್, ಪ್ರಾಥಮಿಕ ಆರೊಗ್ಯ ಸುರಕ್ಷತೆ ಅಧಿಕಾರಿ ಶಶಿಕಲಾ, ರಾಧಾ, ಆಶಾ,ಅಂಗನವಾಡಿ ಸಮುದಾಯ ಆರೋಗ್ಯಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net