

ಜಗಳೂರು: ತಾಲೂಕಿನ ಅಣಬೂರು ಗ್ರಾಮದ ಜಮೀನೊಂದರಲ್ಲಿ ಬಿತ್ತನೆ ಹೋಗಿದ್ದ ಇಬ್ಬರು ರೈತರು ಸಿಡಿಲು ಬಡಿದು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಅಣಬೂರು ಗ್ರಾಮದ ಕಾಟಪ್ಪ (40), ರಾಜಪ್ಪ (35) ಮೃತ ರೈತರು.
ಐದಾರು ಜನರೊಟ್ಟಿಗೆ ಇಬ್ಬರು ರೈತರು ಜಮೀನಿನಲ್ಲಿ ಹತ್ತಿ ಬಿತ್ತನೆ ಮಾಡುತ್ತಿದ್ದಾಗ ಸಂಜೆ ಭಾರಿ ಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಶುರುವಾಗಿದೆ.
ತಕ್ಷಣವೇ ರಕ್ಷಣೆಗಾಗಿ ಮರಗಳ ಸಮೀಪಕ್ಕೆ ಹೋಗಿದ್ದಾರೆ. ಇವರಲ್ಲಿ ಕಾಟಪ್ಪ, ರಾಜಪ್ಪ ಒಂದೇ ಮರದ ಕೆಳಗೆ ನಿಂತಿದ್ದಾರೆ.
ಏಕಾಏಕಿ ಬಡಿದ ಸಿಡಿಲಿಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಕ್ಕದ ಮರದ ಬಳಿ ಇದ್ದವರು ಬಂದು ನೋಡಿದರೆ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಗಾಬರಿಗೊಂಡ ರೈತರು ಕೂಡಲೇ ತಹಸೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಶಾಸಕರ ಭೇಟಿ
ತಾಲೂಕಿನ ಹಾಲೇಕಲ್ಲು ಗ್ರಾಮದ ಕಾರ್ಯಕ್ರಮವೊಂದರಲ್ಲಿದ್ದ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಸುದ್ದಿ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಸಂತೋಷ್‌ಕುಮಾರ್, ಸಿಪಿಐ ಶ್ರೀನಿವಾಸ್ ಅವರನ್ನು ಜತೆಗೆ ಘಟನಾ ಸ್ಥಳಕ್ಕೆ ಧಾವಿಸಿದರು.
ಅಲ್ಲಿದ್ದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಮೃತರ ಕುಟುಂಬದವರಿಗೆ ವೈಯಕ್ತಿಕವಾಗಿ ತಲಾ 25 ಸಾವಿರ ರೂ. ನೀಡುವ ಮೂಲಕ ಧೈರ್ಯ ತುಂಬಿದರು.
ಸರ್ಕಾರ ರೈತರ ಪರ ತಮಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು ಎಂದರು.
ಮೃತ ಇಬ್ಬರ ಕುಟುಂಬಕ್ಕೂ ಅನ್ಯಾಯವಾಗಬಾರದು. ವಿಪತ್ತು ಪರಿಹಾರ ನಿದಿಯಡಿ ಪರಿಹಾರದ ಹಣ ತಲುಪಿಸಲು ಕ್ರಮ ಕೈಗೊಳ್ಳಬೇಕು.
ತಕ್ಷಣ ಮಹಜರ್ ಮಾಡಿಸಿ ಸರ್ಕಾರಕ್ಕೆ ವರದಿ ಕಳಿಸಬೇಕು. ಮುಖ್ಯಮಂತ್ರಿ ಜತೆ ಮಾತನಾಡಿ, ಆದಷ್ಟು ಬೇಗ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.