

ಲೋಕೇಶ್ ಎಂ. ಐಹೊಳೆ ಜಗಳೂರು
ಜಗಳೂರು ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯ ಹಚ್ಚ ಹಸಿರು ಸಿರಿಯೊಂದಿಗೆ ಮೈದಳೆದು ನಿಂತಿದೆ. ಬಯಲುಸೀಮೆಯ ಒಣಕುರುಚಲಂತಿದ್ದ ಈ ಪ್ರದೇಶ, ನಿರಂತರ ಮಳೆಯ ಕಾರಣಕ್ಕೆ ಮಲೆನಾಡಂತೆ ಕಂಗೊಳಿಸುತ್ತಿದೆ. ವಿಶೇಷ ವನ್ಯಜೀವಿಯನ್ನು ತನ್ನೊಡಲಲ್ಲಿ ಇರಿಸಿಕೊಂಡ ಈ ಕಾನನದ ಸುಂದರ ಪರಿಸರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ತಾಲೂಕು ಕೇಂದ್ರದಿಂದ 8 ಕಿ.ಮೀ ದೂರದ ಕೆಳಗೋಟೆಯಿಂದ ಮಡ್ರಳ್ಳಿ (ಗುರುಸಿದ್ದಾಪುರ) ವರೆಗೂ 77.23 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಹಬ್ಬಿದೆ. ಬರದ ನಡುವೆಯೂ ಅಳಿದುಳಿದ ಪ್ರದೇಶದಲ್ಲಿ ಅಪರೂಪದ ವನ್ಯಜೀವಿ ಕೊಂಡುಕುರಿ ಸೇರಿ ವಿವಿಧ ಪ್ರಾಣಿ-ಪಕ್ಷಿಗಳು, ಸಸ್ಯ ಸಂಕುಲಕ್ಕೆ ಆಶ್ರಯ ತಾಣವಾಗಿದೆ.
ಕೊಂಡುಕುರಿ, ಚಿರತೆ, ಕಾಡುಹಂದಿ, ಕಿರುಬ, ಕರಡಿ, ಚಿಪ್ಪು ಹಂದಿ, ತೋಳ, ಮೊಲ ಹೀಗೆ ವಿವಿಧ ಪ್ರಾಣಿಗಳು ಅರಣ್ಯದಲ್ಲಿವೆ. ಇನ್ನೂ ಅಪರೂಪದ ದೊರವಾಯನ ಹಕ್ಕಿ, ನವಿಲು, ಮರಕುಟಿಕ, ಕೌಜ, ಪುರಡಿ, ಹತ್ತಾರು ಜಾತಿಯ ಪಕ್ಷಿ್ಷಳಿವೆ. ಮತ್ತಿ, ಶ್ರೀಗಂಧ, ತೇಗ, ಹೊನ್ನೆ, ಬೀಟೆ, ಕಮರ, ದಿಂಡುಗ ಮರಗಳಲ್ಲದೆ, ಅಮೃತಬಳ್ಳಿ, ನನ್ನಾರಿಯಂತಹ ಅನೇಕ ಔಷಧೀಯ ಗಿಡಗಳನ್ನು ಇಲ್ಲಿ ಕಾಣಬಹುದು.
ತುಂಬಿ ತುಳುತ್ತಿರುವ ಕೆರೆ, ಹಳ್ಳ, ಕೊಳ್ಳಗಳು: ಅರಣ್ಯದ ಕೆಲವೆಡೆ ಕೆರೆ, ಹಳ್ಳ, ಕೊಳ್ಳ, ಗೋಕಟ್ಟೆ, ಚೆಕ್ಡ್ಯಾಂಗಳು ತುಂಬಿ ತುಳುಕುತ್ತಿವೆ. ರಕ್ಕಸ ಘಟ್ಟದ ಮೇಲ್ಭಾಗದಿಂದ ನೋಡಿದರೆ, ಹಸಿರಿನ ನಡುವೆ ಕಾಣುವ ನೀರು ಸಂಗ್ರಹ ಕೊಳಗಳು ಮತ್ತಷ್ಟು ಮುದ ನೀಡುತ್ತವೆ. ಹರಿಯುವ ನೀರಿನ ಜರಿಗಳು, ಮರ-ಗಿಡಗಳ ಮಧ್ಯೆ ಕಲ್ಲು ಪೊಟರೆಗಳಲ್ಲಿ ಹರಿಯುವ ನೀರು ತಿಳಿ ಹಾಲ್ನೊರೆಯಂತೆ ಕಾಣಿಸುತ್ತಿದ್ದು, ಕಂಗಳಿಗೆ ಆಹ್ಲಾದ ನೀಡುತ್ತಿವೆ.
ರಕ್ಕಸ ಘಟ್ಟ ಪ್ರಮುಖ ಆಕರ್ಷಣೆ: ಅರಣ್ಯದ ರಕ್ಕಸಘಟ್ಟ ಏರುವ ವೇಳೆ ಹಸಿರು ಗಿಡ-ಮರಗಳು ಕಣ್ತುಂಬಿದರೆ, ಕಲ್ಲಿನ ಬಂಡೆಗಳು ಬೆವರಿಳಿಸುತ್ತವೆ. ದಾರಿ ಮಧ್ಯೆ ಬಿಕ್ಕೆ, ಕವಳೆ, ನಗರಿ, ಗೇರು, ಕಾರೆ ಇತರೆ ಹಣ್ಣಿನ ಗಿಡಗಳು ಬಾಯಲ್ಲಿ ನೀರು ತರಿಸುತ್ತವೆ. ಬೃಹತ್ ಶಿಲೆಯ ಈ ಸ್ಥಳದಲ್ಲಿ ನೆಲ, ಉಜ್ಜಿನಿ ಸೇರಿ ಎರಡು ಗವಿಗಳಿವೆ. ಚಿರತೆ, ಕರಡಿ ಇನ್ನಿತರೆ ಪ್ರಾಣಿಗಳ ಆಶ್ರಯ ತಾಣವಾಗಿದೆ. ಘಟ್ಟದ ಮೇಲ್ಭಾಗ ಹತ್ತುವುದು ತುಸು ಕಷ್ಟವಾದರೂ ಮೇಲೇರುತ್ತಿದ್ದಂತೆ ಬೀಸುವ ತಂಗಾಳಿ, ಸುತ್ತಲೂ ಹಸಿರು ಹೊದಿಕೆಯ ವಾತಾವರಣ ನೋಡುಗರಿಗೆ ಆಹ್ಲಾದಕರ ಎನಿಸದಿರದು. ಹೀಗಾಗಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.
ಕೊಂಡುಕುರಿ ಇಲ್ಲಿನ ವಿಶೇಷ: ಏಷ್ಯಾ ಖಂಡದಲ್ಲೇ ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ ಕೊಂಡುಕುರಿ. ಗಂಡು ಕೊಂಡುಕುರಿಗೆ ನಾಲ್ಕು ಕೊಂಬುಗಳಿದ್ದು ನೋಡಲು ಅತ್ಯಾಕರ್ಷಕವಾಗಿದೆ. ಜಿಂಕೆಯಷ್ಟೇ ಸೂಕ್ಷ್ಮ, ನಾಚಿಕೆ ಸ್ವಭಾವದ ಪ್ರಾಣಿ. ಕುರುಚಲು ಅರಣ್ಯ ಇದರ ವಾಸಸ್ಥಳ. ವಿಶ್ವದ ಅತಿ ವಿನಾಶದ ಪ್ರಾಣಿಗಳ ಜತೆ ಕೊಂಡುಕುರಿಯನ್ನು ಸೇರಿಸಿರುವುದು ಇದರ ಸಂರಕ್ಷಣೆ ಮಹತ್ವವನ್ನು ಸಾರುತ್ತದೆ.
ಮಾಹಿತಿ ಕೇಂದ್ರಕ್ಕೆ ಒತ್ತಾಯ: ಹೊಸಪೇಟೆ ಸಮೀಪದ ದಾರೋಜಿ ಕರಡಿ ಧಾಮಕ್ಕೆ ತೆರಳುವ ಪ್ರವಾಸಿಗರು ಇದರ ಮಧ್ಯದಲ್ಲಿರುವ ಕೊಂಡುಕುರಿ ವನ್ಯಜೀವಿಧಾಮ ನೋಡಿಕೊಂಡು ಹೋಗಲು ಪ್ರವಾಸಿ ತಾಣದ ಮಾಹಿತಿ ಕೇಂದ್ರ ತೆರೆಯಲು ಸಚಿವರ ಗಮನಕ್ಕೆ ತರಲಾಗಿದೆ. ಕೇಂದ್ರ ಆರಂಭವಾದರೆ ವಿಜ್ಞಾನಿಗಳ, ಯುವಸಮೂಹದವರ ಸಂಶೋಧನೆಗೂ ಸಹಕಾರಿ ಎನ್ನುತ್ತಾರೆ ವನ್ಯಜೀವಿ ಪರಿಸರ ಆಸಕ್ತ ಡಾ.ಟಿ.ಜಿ.ರವಿಕುಮಾರ್.
ರಂಗಯ್ಯನದುರ್ಗದಲ್ಲಿ ಕೊಂಡುಕುರಿ ಇರುವುದು ನಮ್ಮ ಭಾಗ್ಯ. ವನ್ಯಜೀವಿ ಅಭಯಾರಣ್ಯವೆಂದು ಘೊಷಿಸಿದ ಬಳಿಕ ದನಕುರಿಗಳ ಪ್ರವೇಶಕ್ಕೆ ನಿಷೇಧವಿದೆ. ನಿತ್ಯ ಪ್ರವಾಸಿಗರು ಬರುತ್ತಿದ್ದು, ಪ್ರವಾಸಿ ತಾಣವಾದರೆ, ಇನ್ನಷ್ಟು ಮೆರುಗು ಹೆಚ್ಚಲಿದೆ. | ಹೊನ್ನೂರ್ ಸಾಬ್, ಪರಿಸರಪ್ರೇಮಿ ಇಲ್ಲಿನ ಅಭಿವೃದ್ಧಿ ನಿರಂತರ. ಅದಕ್ಕೆ ಅಗತ್ಯ ಸಹಕಾರ ನೀಡುತ್ತೇನೆ. ಕೊಂಡುಕುರಿಗಳ ಸಂಖ್ಯೆ 150ಕ್ಕೂ ಹೆಚ್ಚಾಗಿದ್ದು, ಅರಣ್ಯದಂಚಿನ ಗ್ರಾಮದ ಜಮೀನುಗಳಿಗೆ ಪ್ರಾಣಿಗಳು ನುಗ್ಗಿ ಬೆಳೆ ಹಾನಿ ಮಾಡಿವೆ. ನಷ್ಟಕ್ಕೀಡಾದ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು. | ಬಿ.ದೇವೇಂದ್ರಪ್ಪ, ಶಾಸಕ