ಸಿದ್ಧಪುರುಷರ ತಪೋಕ್ಷೇತ್ರ ಜಡೇನಹಳ್ಳಿ

27-bidadi-2
Published on

> ದೈವಿಕ ಶಕ್ತಿಯಿಂದ ಉದಯಿಸಿದ ಜಡೆಯೂರು ಬೆಳವಣಿಗೆಯೇ ರೋಚಕ

ಚೇತನ್​ ಚಕ್ಕೆರೆ ಬಿಡದಿ

ಪ್ರತಿ ಗ್ರಾಮದ ಉದಯದ ಹಿನ್ನೆಲೆ, ಐತಿಹ್ಯದಂತೆ ಗ್ರಾಮದ ಹೆಸರಿಗೂ ಇತಿಹಾಸ ಇರುವುದು ಸಾಮಾನ್ಯ. ಅದೇ ರೀತಿ ಬಿಡದಿ ಹೋಬಳಿಯ ಜಡೇನಹಳ್ಳಿ ಉದಯದ ಹಿಂದೆ ದೇವರ ಶಕ್ತಿ, ಮಹಿಮೆ ಅಡಗಿದೆ ಎನ್ನುವುದು ವಿಶೇಷ.

ಹೌದು... ಈಗಿನ ಜಡೇನಹಳ್ಳಿ ಗ್ರಾಮ ಚಿಕ್ಕದಾದರೂ ಗ್ರಾಮದ ಹೆಸರಿನ ಹಿಂದೆ ಸುದೀರ್ ಇತಿಹಾಸವಿದ್ದು, ನೂರಾರು ವರ್ಷಗಳ ಹಿಂದೆ ಸಿದ್ಧಪುರುಷರು ಗ್ರಾಮದಲ್ಲಿ ನೆಲೆ ಕಂಡಿದ್ದರು ಎಂಬುದಕ್ಕೆ ಹಲವು ಕುರುಹುಗಳು ಗ್ರಾಮದಲ್ಲಿವೆ.

ಜಡೆಯೂರಿನಿಂದ ಜಡೇನಹಳ್ಳಿ

ಇಗೀನ ಜಡೇನಹಳ್ಳಿ ಈ ಹಿಂದೆ ಜಡೆಯೂರು ಎಂದು ಕರೆಯಲ್ಪಡುತಿತ್ತು. ಈ ಗ್ರಾಮಕ್ಕೆ ಜಡೇನಹಳ್ಳಿ ಎಂಬ ಹೆಸರು ಬರಲು ಮೂಲ ಕಾರಣ ಊರಿನ ಮಧ್ಯದ ಪುರಾತನ ಹನುಮಂತನ ದೇಗುಲ. ಅಂದಿನ ಕಾಲದಲ್ಲಿ ಕಾಡು, ಕಲ್ಲು ಬಂಡೆ ಮತ್ತು ಮಣ್ಣಿನಿಂದ ಕೂಡಿ ಗುಡ್ಡದಂತಿದ್ದ ಈ ಗ್ರಾಮದಲ್ಲಿ ಜಡೆಮುನೇಶ್ವರ ಎಂಬ ಸ್ವಾಮಿ ಹಾಗೂ ಸಿದ್ಧಪುರುಷರು ಬಂದು ತಪಸ್ಸು ಮಾಡುತಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನ ಇಲ್ಲಿಗೆ ಆಗಮಿಸಿ ಸ್ವಾಮಿಗಳ ಆಶೀರ್ವಾದ ಪಡೆಯುತ್ತಿದ್ದರು. ಜಡೆ ಮುನೇಶ್ವರ ಸ್ವಾಮಿಗೆ ಜಡೆ ಇದ್ದ ಕಾರಣ ಜನರು ಈ ಊರಿಗೆ ಜಡೆಯೂರು ಎಂದು ಕರೆಯುತಿದ್ದರು. ಕಾಲ ಕಳೆದಂತೆ ಜಡೆಯೂರು ಜಡೆಹಳ್ಳಿಯಾಗಿ, ಈಗ ಜಡೇನಹಳ್ಳಿಯಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಕರು.

ಕಂದಾಯ ಗ್ರಾಮ

ಜಡೇನಹಳ್ಳಿಯು ಬನ್ನಿಕುಪ್ಪೆ ಕಂದಾಯ ಗ್ರಾಮ ದಾಖಲೆಯ ಒಂದು ಮಜರೆ ಗ್ರಾಮ. ಪೂರ್ಣ ಒಕ್ಕಲಿಗರೇ ವಾಸಿಸುವ ಈ ಗ್ರಾಮದಲ್ಲಿ ಸುಮಾರು 500ರಿಂದ 600 ಜನಸಂಖ್ಯೆಯಿದ್ದು, ಭೌಗೋಳಿಕವಾಗಿ 5-6 ಎಕರೆ ಭೂ ಪ್ರದೇಶ ಹೊಂದಿದೆ. ವ್ಯವಸಾಯ ಮತ್ತು ಹೈನುಗಾರಿಕೆ ಇಲ್ಲಿನ ಜನರ ಮುಖ್ಯ ಕಸುಬು.

ಪ್ರಸಿದ್ಧ ದೇವಾಲಯಗಳು

ಗ್ರಾಮದ ಮಧ್ಯೆ ಪುರಾತನ ಹನುಮಂತನ ದೇವಾಲಯವಿದ್ದು, ಇತ್ತೀಚೆಗೆ ಜೀಣೋರ್ದ್ಧಾರಗೊಂಡಿದೆ. ಜತೆಗೆ ಊರಿನ ಹೆಬ್ಬಾಗಿಲಿನಲ್ಲಿ ಗ್ರಾಮದೇವತೆ ಕುಂದಾಳ್ದಮ್ಮ ಹಾಗೂ ಆಂಜನೇಯ ಸ್ವಾಮಿ ದೇವಾಲಯವಿದ್ದು, ಪ್ರತಿ ವರ್ಷ ಗ್ರಾಮ ದೇವತೆ ಕುಂದಾಳ್ದಮ್ಮ ದೇವಿಯ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗ್ರಾಮದ ಕೂಗಳತೆ ದೂರದಲ್ಲಿ ಶ್ರೀ ವರದರಾಜೇಶ್ವರ ಸ್ವಾಮಿಯ ದೇವಾಲಯವಿದ್ದು, ದೇವಾಲಯವು ರಾಜ್ಯ ಹಾಗೂ ಹೊರ ರಾಜ್ಯದಲ್ಲೂ ಪ್ರಸಿದ್ಧಿ ಪಡೆದಿದೆ.

ಸಾಮಾಜಿಕ, ರಾಜಕೀಯ ಬೆಳವಣಿಗೆ

ಈ ಗ್ರಾಮ ಸಾಮಾಜಿಕವಾಗಿ ಪೊಲೀಸ್​, ವಕೀಲರು, ಶಿಕ್ಷಕರು ಹಾಗೂ ವೈದ್ಯರನ್ನು ಕೊಡುಗೆಯಾಗಿ ನೀಡಿದೆ. ಇನ್ನು ರಾಜಕೀಯವಾಗಿ ಮೊದಲು ಲಕ್ಷ್ಮೀ ಸಾಗರ ಮಂಡಲ ಪಂಚಾಯತ್​ ವ್ಯಾಪ್ತಿಗೆ ಒಳಪಟ್ಟಿದ್ದ ಜಡೇನಹಳ್ಳಿ, ನಂತರ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದಮೇಲೆ ಬನ್ನಿಕುಪ್ಪೆಗೆ ಸೇರ್ಪಡೆಯಾಗಿತು. ಅಲ್ಲಿಂದ ಮೂರು ಅವಧಿಗೆ ಪಂಚಾಯಿತಿ ಅಧ್ಯರನ್ನು ಕೊಟ್ಟಿದೆ.

ಪ್ರವಾಸಿತಾಣ ಹೊಂದಿರುವ ಗ್ರಾಮ

ಜಡೇನಹಳ್ಳಿ ನೈಸರ್ಗಿಕವಾಗಿ ಕಾಡಿಗೆ ಹೊಂದಿಕೊಂಡಿರುವುದರಿಂದ ಸುತ್ತಮುತ್ತ ಹಸಿರಿನಿಂದ ಕೂಡಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿದ್ದು, ಗ್ರಾಮದ ಪಕ್ಕದಲ್ಲೇ ವಂಡರ್ಲಾ ಅಮ್ಯೂಸ್​ ಮೆಂಟ್​ ಪಾರ್ಕ್​ ಜತೆಗೆ ಹಲವು ರೆಸಾರ್ಟ್​ಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net