ಬ್ರೋಕರ್​ಗಿಂತಲೂ ಜೋಕರ್​ ಆಗಿರುವುದು ಮೇಲು

Published on

ಬಸನಗೌಡ ಯತ್ನಾಳ್​ಗೆ ಶಾಸಕ ಪ್ರದಿಪ್​ ಈಶ್ವರ್​ ಅಯ್ಯರ್​ ಟಾಂಗ್​

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ

ಬ್ರೋಕರ್​ಗಿಂತಲೂ ಜೋಕರ್​ ಆಗಿರುವುದು ಮೇಲು. ನಾನೂ ಒಬ್ಬ ಜೋಕರ್​ ಎಂದು ಶಾಸಕ ಪ್ರದಿಪ್​ ಈಶ್ವರ್​ ಅಯ್ಯರ್​ ಪರೋಕ್ಷವಾಗಿ ಶಾಸಕ ಬಸನಗೌಡ ಯತ್ನಾಳ್​ ಪಾಟೀಲ್​ಗೆ ಟಾಂಗ್​ ಕೊಟ್ಟರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿಯೇ ಸದಸ್ಯತ್ವ ಇಲ್ಲ. ಹೀಗಿರುವಾಗ 2028ನೇ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿ ಹೇಗೆ ಆಗುತ್ತಾರೆ. ಇದೆಲ್ಲವೂ ಹಗಲಗನಸು. ಇದನ್ನು ಅವರು ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಚಾರವನ್ನು ಅವರಿಗೆ ಬಿಟ್ಟು ಬಿಡೋಣ ಎಂದರು.

ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು. ಇದನ್ನು ಬಿಟ್ಟು ಜೆಸಿಬಿ ತಂದು ಕಟ್ಟಡ ಹೇಗೆ ಕೆಡವಲಾಗುತ್ತದೆ? ಅವರಿಗೆ ಧೈರ್ಯವಿದ್ದಲ್ಲಿ ಕ್ಷೇತ್ರಗಳಿಗೆ ಬುಲ್ಡೋಜರ್​ ತಂದು ಕೆಲಸ ಮಾಡಿಸಲಿ ಎಂದು ಎಚ್ಚರಿಸಿದರು. ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಠೇವಣಿ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ಯತ್ನಾಳ್​ ಹೇಳುವ ಅವಶ್ಯ ಇಲ್ಲ ಎಂದ ಅವರು, ಅಮ್ಮ ಆಂಬುಲೆನ್ಸ್​ ಸೇವೆ ಕೈ ಹಿಡಿದರೆ ಮುಂದೆ ಗೆಲುವು ಕಾಣುತ್ತೇನೆ ಎಂದರು.

ಪವನ್​ಗೆ ಬೆಂಬಲ

ಕರ್ನಾಟಕಕ್ಕೆ ಕೃಷ್ಣ ನದಿ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಆಂಧ್ರದ ಉಪ ಮುಖ್ಯಮಂತ್ರಿ ಪವನ್​ ಕಲ್ಯಾಣ್​ ಹೇಳಿಕೆ ಸ್ವಾಗತಾರ್ಹ. ಈ ಭಾಗದಲ್ಲಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಸೂಕ್ತ ಯೋಜನೆಗಳ ಜಾರಿಗೆಗೆ ಒತ್ತಾಯಿಸಲಾಗುತ್ತಿದೆ. ಇದಕ್ಕೆ ಪ್ರಾಮಾಣಿಕ ಸ್ಪಂದನೆ ಸಿಗಬೇಕು ಎಂದರು.

ನಕಲಿ ಪತ್ರ ರದ್ದು

ಹಿಂದೆ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಗೆಲ್ಲಬೇಕೆಂಬ ಉದ್ದೇಶದೊಂದಿಗೆ ಸಂಸದರು ನೀಡಿರುವ ಹಕ್ಕು ಪತ್ರ ನಕಲಿ. ಇದೆಲ್ಲವೂ ರದ್ದಾಗಿದೆ. ನಿವೇಶನ ಜಾಗ ಗುರುತಿಸದೆ ಹೇಗೆ ದಾಖಲೆ ನೀಡಲಾಗುತ್ತದೆ. ಚುನಾವಣೆಯಲ್ಲಿ ಜನರ ಮತ ಪಡೆಯಬೇಕೆಂಬ ದುರುದ್ದೇಶದಿಂದ ಹಕ್ಕುಪತ್ರ ವಿತರಿಸಲಾಗಿತ್ತು. ಇದು ಸರ್ಕಾರಿ ನಿಯಮಗಳಂತೆ ಇಲ್ಲ. ಅರ್ಜಿದಾರರು ದಾಖಲೆಯ ಪತ್ರವನ್ನಿಟ್ಟುಕೊಂಡು ನಿವೇಶನ ಎಲ್ಲಿದೆ ಎಂಬುದನ್ನು ಅವರನ್ನೇ ಕೇಳಲಿ? ಎಂದ ಶಾಸಕರು, ನಿವೇಶನ ರಹಿತರಿಗೆ ಸರ್ಕಾರದಿಂದ ಹೊಸದಾಗಿ ಹಕ್ಕು ಪತ್ರ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net