

ಮದ್ದೂರು: ಪರಿಸರ ಉಳಿಸದೆ ಹೋದರೆ ಮುಂದಿನ ದಿನಗಳಲ್ಲಿ ಸಂಕಷ್ಟದ ದಿನಗಳನ್ನು ಎದುರು ನೋಡಬೇಕಾಗುತ್ತದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ವರ್ಧಮಾನ್ ಇಂಟರ್ ನಾಷನಲ್ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯನ ಅತಿಯಾದ ದುರಾಸೆಯಿಂದ ಪರಿಸರ ನಾಶವಾಗಿ ಹಲವಾರು ರೀತಿಯ ದುಷ್ಪರಿಣಾಮ ಬೀರುತ್ತಿದೆ. ಇದನ್ನು ಅರಿತು ನಾವು ಪರಿಸರ ರಕ್ಷಣೆ ಮಾಡಬೇಕು ಎಂದರು.
ಮುಖ್ಯಶಿಕ್ಷಕಿ ಶ್ವೇತಾ ದೀಪಕ್ ಮಾತನಾಡಿ, ಪರಿಸರ ನಮಗೆ ಪರಿಶುದ್ಧ ಗಾಳಿ, ನೀರು, ಆಹಾರ, ಬೆಳಕು ಸೇರಿದಂತೆ ಬದುಕಲು ಎಲ್ಲ ರೀತಿಯ ಅವಶ್ಯಕತೆಗಳನ್ನು ನೀಡುತ್ತಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಜಲ ಮೂಲಗಳನ್ನು ರಕ್ಷಣೆ ಮಾಡಬೇಕು ಮತ್ತು ಪ್ಲಾಸ್ಟಿಕ್ ಬಳಕೆ ಮಾಡದೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಬಳಕೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲೆಯ ಕಾರ್ಯದರ್ಶಿ, ದೀಪಕ್, ಮಾಜಿ ಸೈನಿಕ ವಿ.ಡಿ.ಶ್ರೀನಿವಾಸ್, ಕನ್ನಡಪರ ಹೋರಾಟಗಾರ ವೀರಪ್ಪ, ಸಾಗರ್, ಗಾಯಕ ವಿ.ಎಂ.ರಮೇಶ್ ಇದ್ದರು.