

ಬೆಂಗಳೂರು: ಪರಿಶುದ್ಧವಾದ ಕಾಯಕದಿಂದ ಭಾವಪೂರ್ಣ ದಾಸೋಹವನ್ನು ಕಲಿಸಿಕೊಟ್ಟ ಬಸವಾದಿ ಪ್ರಮಥರು ಪರಿವರ್ತನೆ ಅಡಿಪಾಯ ಹಾಕಿದ ಮೊದಲಿಗರು ಎಂದು ಖ್ಯಾತ ಸಂಗೀತಗಾರ ಪಂ. ಹುಸೇನಸಾಬ್ ಹೇಳಿದರು. ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಕಾರ್ತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸಾರದ ಹೊರತಾಗಿ ಸಾಮಾಜಿಕ ಸೇವಾ ಕಾರ್ಯಗಳು ನಮ್ಮ ಬದುಕಿಗೆ ಅರ್ಥವನ್ನು ತಂದುಕೊಡುತ್ತವೆ. ರೂಪಾಂತರಕ್ಕಿಂತ ಪರಿವರ್ತನೆ ಬಹಳ ಮುಖ್ಯ. ಇದನ್ನು ಸಾಧಿಸಿ ತೋರಿಸಿದವರು ವಚನಕಾರರು ಎಂದು ಬಣ್ಣಿಸಿದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಕಾರ್ತಿಕ ದೀಪೋತ್ಸವಗಳು ಇಂದು ಆಡಂಬರದ ಸಂಕೇತವಾಗಿದ್ದು, ಭಕ್ತಿಗಿಂತ ಪ್ರದರ್ಶನವೇ ಹೆಚ್ಚಾಗಿದೆ. ಆದ್ದರಿಂದ ಸಾಲು ಸಾಲು ದೀಪಗಳನ್ನು ಹೊತ್ತಿಸಿ ವಿದ್ಯುತ್ ಬೆಳಕಿಗೆ ಮತ್ತಷ್ಟು ಬೆಳಕನ್ನು ನೀಡುವ ಕಾರ್ತಿಕೋತ್ಸವದ ಬದಲು ವಚನಗಳೆಂಬ ವೈಚಾರಿಕ ಜ್ಯೋತಿಯನ್ನು ಬೆಳಗುವ ವಚನ ಕಾರ್ತಿಕ ಹೆಚ್ಚು ಅರ್ಥಪೂರ್ಣ ಎಂದರು.
ಕಾರ್ಯಕ್ರಮದಲ್ಲಿ ಡಾ. ಅನುಪಮಾ ಪಂಚಾಕ್ಷರಿ ಉಪನ್ಯಾಸ ನೀಡಿದರು. ಪುಟಾಣಿಗಳಾದ ಪ್ರದ್ಯೋತ್, ಸಾತ್ವಿಕ ಬಾಚಲಾಪುರ, ಶ್ರಾವಣಿ ಹಣ್ಣಿ, ಜಯಾ ಹಣ್ಣಿ, ಸರ್ವಾಣಿ ಯೋಗೇಶ್ ಹಾಗೂ ವಚನ ಕಲಿಕಾ ವಿದ್ಯಾರ್ಥಿಗಳು ವಚನ ಗಾಯನ ಮಾಡಿದರು.
ವಚನಜ್ಯೋತಿ ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಸಿಇಓ ರಾಜಾ ಗುರುಪ್ರಸಾದ್, ಸಂಚಾಲಕರಾದ ಮೀನಾಕ್ಷಿ ಮೇಟಿ, ಮಧು ಶಿವಕುಮಾರ್, ಶಶಿ ವಿಶ್ವನಾಥ್, ಪ್ರಸನ್ನ, ದಿವಾಕರ್, ಕನ್ನಡ ಸಂಸ್ಕೃತಿ ಇಲಾಖೆಯ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.