

ಆದಾಯ ತೆರಿಗೆ ಪಾವತಿಸದಿದ್ದರೂ ಅರ್ಜಿಗಳು ತಿರಸ್ಕೃತ
ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆ ಕೆಲವರ ಪಾಲಿಗೆ ಇನ್ನೂ ಒಲಿಯದ ಲಕ್ಷ್ಮಿಯಾಗಿಯೇ ಉಳಿದುಕೊಂಡಿದೆ.
ಯೋಜನೆ ಜಾರಿಗೆ ಬಂದ ದಿನದಿಂದಲೂ ಅರ್ಜಿ ಸ್ವೀಕಾರಗೊಂಡು ಹಣ ಮಂಜೂರಾತಿಗೆ ಒಂದಿಲ್ಲೊಂದು ಕಾರಣಕ್ಕೆ ತೊಡಕಾಡುತ್ತಲೇ ಇದ್ದು, ಈಗ ಆದಾಯ ತೆರಿಗೆ ಹೆಸರಲ್ಲಿ ಸಮಸ್ಯೆ ಸೃಷ್ಟಿಯಾಗಿದೆ.
ಬಹುತೇಕ ರಾಜ್ಯದ ಎಲ್ಲ ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ 5 ಕಂತು ಬಿಡುಗಡೆಗೊಂಡಿದ್ದು, ಈಗಲೂ ಕೆಲವರ ಅರ್ಜಿಗಳು ಅಂಗೀಕಾರವಾಗದ ಕಾರಣ ಪ್ರತಿ ದಿನ ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ಪರಿಶೀಲಿಸಿದರೂ ಸಮಸ್ಯೆಗೆ ಪರಿಹಾರ ಮಾತ್ರ ದೊರೆಯುತ್ತಿಲ್ಲ.
ಪ್ರಸ್ತುತ ಜಿಲ್ಲೆಯಲ್ಲಿ ಈವರೆವಿಗೂ ಒಟ್ಟು 2,68,220 ಮಂದಿ ಗೃಹ ಲಕ್ಷ್ಮಿ ಯೋಜನೆ ಲಾನುಭವಿಗಳಾಗಿ ನೋಂದಾಯಿಸಿಕೊಂಡು ಹಲವು ಕಂತುಗಳ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇನ್ನೂ 26,179 ಮಂದಿ ಮಹಿಳೆಯರು ಇದರ ಸೌಲಭ್ಯ ಪಡೆದುಕೊಂಡಿಲ್ಲ.
ಸರ್ಕಾರ ಈ ಯೋಜನೆ ಜಾರಿಗೆ ಮುನ್ನವೇ ಆದಾಯ ತೆರಿಗೆ ಪಾವತಿ ಮಾಡುವ ಕುಟುಂಬದ ಯಜಮಾನಿ ಅಥವಾ ಲಾನುಭವಿ ಆಗಲು ಬಯಸುವ ಮಹಿಳೆಯ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು ಎನ್ನುವ ಷರತ್ತು ವಿಧಿಸಿದೆ. ಈಗ ಬಹುತೇಕ ಅರ್ಜಿಗಳು ವಿಲೇವಾರಿ ಆಗದೇ ಉಳಿದಿರುವುದಕ್ಕೆ ಇದೇ ಪ್ರಮುಖ ಕಾರಣವಾಗಿದೆ.
ಜೀವನೋಪಾಯಕ್ಕೆ ಕೂಲಿ ಮಾಡುವವರು, ಸಣ್ಣ ಗೂಡಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುವವರು ಹಾಗೂ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುವವರ ಅರ್ಜಿಗಳು ಐಟಿ ಜಿಎಸ್‌ಟಿ ತೆರಿಗೆ ಪಾವತಿದಾರರ ನಿಯಮದ ಅಡಿಯಲ್ಲಿ ಬರುತ್ತಿವೆ ಎನ್ನುವ ಸ್ಟೇಟಸ್ ತೋರಿಸುತ್ತಿವೆ.
ಅರ್ಜಿ ಸ್ಟೇಟಸ್ ನಲ್ಲಿ ಅರ್ಜಿಯು ಐಟಿ ಮತ್ತು ಜಿಎಸ್‌ಟಿ ತೆರಿಗೆ ಪಾವತಿ ದಾರರ ಅಡಿಯಲ್ಲಿ ಬರುತ್ತಿದೆ ಎನ್ನುವ ಸಂದೇಶ ಬರುತ್ತಿದೆ ಎನ್ನುವ ಅರ್ಜಿದಾರರು ತಮ್ಮ ಪಾನ್‌ಕಾರ್ಡ್ ಹಿಡಿದು ಖಾಸಗಿ ಲೆಕ್ಕ ಪರೀಶೋಧಕರ ಕಚೇರಿಗಳಿಗೆ ಸೈಬರ್ ಸೆಂಟರ್‌ಗಳಿಗೆ ಅಲೆದಿದ್ದಾರೆ. ನಾವು ಯಾವುದೇ ಟ್ಯಾಕ್ಸ್ ಕಟ್ಟುತ್ತಿಲ್ಲ, ಆದರೂ ನಮಗೇಕೆ ಹೀಗೆ ಬರುತ್ತಿದೆ ಎಂದು ಕೇಳಿಕೊಂಡು ಹೋಗುತ್ತಿರವವರ ಸಂಖ್ಯೆ ಕಡಿಮೆ ಆಗಿಲ್ಲ. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗಳು, ಅಂಗನವಾಡಿ ಕಾರ್ಯಕರ್ತೆಯರ ಬಳಿ ಕೂಡ ಗೋಗರೆಯುವುದು ಸಾಮಾನ್ಯ ಎನ್ನುವಂತೆ ಆಗಿದೆ.
ಐಟಿ /ಜಿಎಸ್‌ಟಿ ತೆರಿಗೆ ಪಾವತಿದಾರರು ಎನ್ನುವ ಮಾನದಂಡ ಮುಂದಿಟ್ಟುಕೊಂಡು ಕೆಲವರ ಅರ್ಜಿಗಳು ವಿಲೇ ಆಗದೇ ಬಾಕಿ ಉಳಿದಿದ್ದು, ಇವುಗಳನ್ನು ಸರ್ಕಾರ ಕೂಡಲೇ ಗಮನ ಹರಿಸಿ ಸರಿಪಡಿಸಬೇಕಿದೆ. ಈ ಹಿಂದೆಯೂ ವಿವಿಧ ಕಾರಣಗಳಿಗೆ ಅರ್ಜಿಗಳ ಸ್ವೀಕಾರ ಆಗುತ್ತಿರಲಿಲ್ಲ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿತ್ತು. ಈಗ ಇದೇ ಮಾದರಿಯಲ್ಲಿ ವೆಬ್‌ಸೈಟ್‌ನಲ್ಲಿ ಉಂಟಾಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಿದರೆ ಜೀವನ ನಿರ್ವಹಣೆಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಅರ್ಹ ಮಹಿಳೆಯರಿಗೆ ನೆರವಾಗಲಿದೆ.
ನಾನಾಗಲಿ ಅಥವಾ ನನ್ನ ಕುಟುಂಬದ ಯಾರೂ ಆದಾಯ ತೆರಿಗೆ ಪಾವತಿದಾರರಲ್ಲ. ಆದರೂ, ನನ್ನ ಅರ್ಜಿ ಸ್ಟೇಟಸ್‌ನಲ್ಲಿ ಈ ರೀತಿ ಬಂದಿದೆ. ಸರ್ಕಾರ ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಡಬೇಕು.
ಹೆಸರು ಹೇಳಲಿಚ್ಚಿಸದ ಅರ್ಜಿದಾರರು
ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ ಎನ್ನುವ ಕಾರಣಕ್ಕೆ ಕೆಲವೊಂದು ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಈ ಸಂಬಂಧ ಮೇಲಿನ ಕಚೇರಿಗೆ ಮಾಹಿತಿ ನೀಡಲಾಗಿದೆ. ಇದನ್ನು ಸರಿಪಡಿಸುವ ಕೆಲಸವೂ ನಡೆಯುತ್ತಿದೆ.
ಪ್ರಸನ್ನಕುಮಾರ್, ಡಿಡಿ (ಪ್ರಭಾರ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ