ಕಲಿಕೆಗೆ ಸಹಕರಿಸುವುದು ಪಾಲಕರ ಕರ್ತವ್ಯ

ಕಲಿಕೆಗೆ ಸಹಕರಿಸುವುದು ಪಾಲಕರ ಕರ್ತವ್ಯ
Published on

ಪಾಂಡವಪುರ: ಪ್ರತಿಭೆ ಹೊಂದಿರುವ ಮಕ್ಕಳಿಗೆ ಪಾಲಕರು ಮತ್ತು ಶಿಕ್ಷಕರು ಪ್ರೋತ್ಸಾಹ, ಸಹಕಾರ ನೀಡಬೇಕು, ಇಲ್ಲವಾದರೆ ಮಕ್ಕಳಲ್ಲಿರುವ ಪ್ರತಿಭೆ ಕಮರಿ ಹೋಗಲಿದೆ. ವಿದ್ಯಾರ್ಥಿಗಳ ಕಲಿಕೆಗೆ ಉತ್ತಮವಾದ ಪರಿಸರ ರೂಪಿಸುವುದು ಕೂಡ ಪಾಲಕರ ಜವಬ್ದಾರಿಯಾಗಿದೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ಪಟ್ಟಣದ ಕಸಾಪ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ವಿದ್ಯಾರ್ಥಿನಿ ಅಪೇಕ್ಷಾ ಕೋಡಾಲ ಅವರ ‘ನಿಶ್ಯಬ್ಧ ಇರುಳು’ ಕಾದಂಬರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಓದುವ ದಿನಗಳಲ್ಲಿ ಕಲಿಕೆಯೊಂದಿಗೆ ಪುಸ್ತಕ ಬರೆದಿರುವುದು ನಿಜಕ್ಕೂ ಶ್ಲಾಘನೀಯ. ಪ್ರಸ್ತುತ ದಿನಗಳಲ್ಲಿ ಮಕ್ಕಳು ಶಾಲೆಗೆ ಹೋಗಿ ಓದುವುದೇ ಕಷ್ಟದ ಕೆಲಸ. ಅಂತಹದರಲ್ಲಿ ವಿದ್ಯಾರ್ಥಿನಿ ಅಪೇಕ್ಷಾ ನಿಶ್ಯಬ್ಧ ಇರುಳು ಎಂಬ ಕಾದಂಬರಿ ರಚಿಸಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಪುಸ್ತಕ ಬರೆಯುವಂತಹ ವಿದ್ಯಾರ್ಥಿಗಳಿಗೆ ತಾಳ್ಮೆ ಹಾಗೂ ಸಮಯ ಪ್ರಜ್ಞೆ ಇರಬೇಕು. ಕುಮಾರಿ ಅಪೇಕ್ಷಾ ಅವರಿಗೆ ಎರಡೂ ಇದೆ. ಹೀಗಾಗಿ ಉತ್ತಮ ಕಾದಂಬರಿ ಬರೆಯಲು ಸಾಧ್ಯವಾಗಿದೆ. ಮಕ್ಕಳು ಇಚ್ಚೆಪಡುವ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಹಕಾರ ಮಾಡಬೇಕೆ ಹೊರತು ಇದೇ ಕ್ಷೇತ್ರದಲ್ಲಿ ಹೋಗಬೇಕು ಎಂಬ ಒತ್ತಡ ಪಾಲಕರು ಹೇರಬಾರದು ಎಂದು ಸಲಹೆ ನೀಡಿದರು.

ಸಾಹಿತಿ ಡಾ.ಮೀರಾಶಿವಲಿಂಗಯ್ಯ ಮಾತನಾಡಿ, ಪುಸ್ತಕಗಳು ಓದುಗರಿಗೆ ಸೂಕ್ಷ್ಮ ಸಂವೇದನೆಯನ್ನು ಭೇಟಿಮಾಡಿಸುವ ಕೆಲಸ ಮಾಡುತ್ತವೆ. ವರ್ತಮಾನದ ಘಟನೆಗಳು, ಓದುಗರ ಹೃದಯದಲ್ಲಿ ಭಾವನಾತ್ಮಕ ಅಲೆಗಳನ್ನು ಹೆಚ್ಚಿಸಲಿದೆ. ಅಪೇಕ್ಷಾ ಅವರು ಭಯೋತ್ಪಾದನೆಯ ಕುರಿತು ತುಂಬಾ ಚನ್ನಾಗಿ ಕಾದಂಬರಿ ರಚಿಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಭಯೋತ್ಪಾದನ ಘಟನೆಗಳ ಕುರಿತು ವಿವರವಾಗಿ ಕಥಾ ಸಂಕಲವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿಗೆ ಒಳಗಾದ ಮಕ್ಕಳ ಮನಸ್ಸಿನ ಮೇಲೆ ಭೀಕರವಾದ ಪರಿಣಾಮ ಬೀರುತ್ತಿದೆ. ಮೊಬೈಲ್ ಅಂತಃಕರಣದಲ್ಲಿ ಮನಷ್ಯತ್ವವನ್ನು ಕಡಿಮೆ ಮಾಡುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಶಿಲ್ಪಶ್ರೀ ಮಾತನಾಡಿದರು.
ಸಮಾರಂಭದಲ್ಲಿ ಬಿಆರ್‌ಸಿ ಪ್ರಕಾಶ್, ಸಾಹಿತಿ ಚಂದ್ರಶೇಖರಯ್ಯ, ಹುಸ್ಕೂರು ಕೃಷ್ಣೇಗೌಡ, ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ನಾಗಲಿಂಗೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net