

ಬೆಂಗಳೂರು:ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಬಸವೇಶ್ವರ ಯುವಕರ ಸಂಘ, ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಗಂಗೊಂಡಹಳ್ಳಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನ್ಯಭಾಷಿಕರು ತುಂಬಿರುವ ನಗರದ ಕೆಲ ಪ್ರದೇಶಗಳಲ್ಲಿ ಈಗಲೂ ಕನ್ನಡ ಮಾತನಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಡಾವಣೆಗಳಲ್ಲಿ ರಾಜ್ಯೋತ್ಸವ ಆಚರಿಸುತ್ತಿಲ್ಲ. ಭವಿಷ್ಯದಲ್ಲಿ ರಾಜ್ಯೋತ್ಸವ ಅಥವಾ ಧ್ವಜ ಹಾರಿಸಲು ಮತ್ತು ನಾಡಗೀತೆ ಪ್ರಚುರಪಡಿಸಲು ಪೊಲೀಸರ ಅನುಮತಿ ಕೇಳುವ ಸಂದರ್ಭ ಬಂದರೂ ಆಶ್ವರ್ಯಪಡಬೇಕಿಲ್ಲ ಎಂದರು.
ಕನ್ನಡ ಸೇನೆ ಅಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಕನ್ನಡಿಗರಿಗೆ ಬಿಟ್ಟು ಉಳಿದ ಎಲ್ಲರಿಗೂ ಉದ್ಯೋಗ ದೊರಕಿದೆ. ಡಾ.ಮಹಿಷಿ ವರದಿ ಜಾರಿಯಾದರೆ ಕನ್ನಡಿಗರಿಗೆ ಉದ್ಯೋಗ ಸಿಗುತ್ತದೆ. ಈ ನಿಟ್ಟಿನಲ್ಲಿ ಈಗಿನ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಎಂದರು. ಯಲಹಂಕ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಮಮೂರ್ತಿ, ಆಶ್ರಯ ಸಮಿತಿ ಮಾಜಿ ಸದಸ್ಯ ಜಿ.ಎಚ್. ನಾಗರಾಜ್, ಮಾಜಿ ತಾಲೂಕು ಪಂಚಾಯತಿ ಸದಸ್ಯೆ ಸುನಂದ ಶಾಂತರಾಜು, ಮಾಜಿ ಗ್ರಾಪಂ ಸದಸ್ಯ ಶ್ರೀನಿವಾಸ್ ಮತ್ತಿತರರಿದ್ದರು.