

ಹನೂರು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಈಗ ಚುನಾವಣೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಮಾಜಿ ಶಾಸಕ ಆರ್.ನರೇಂದ್ರ ಬೇಸರ ವ್ಯಕ್ತಪಡಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರಲ್ಲದ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ ಹಿಂದೆ ರೈತರಿಗೆ ಸುಮಾರು 300 ಕೋಟಿ ರೂ.ಗಿಂತ ಹೆಚ್ಚು ಸಾಲ ನೀಡಲಾಗಿತ್ತು. ಇದರಲ್ಲಿ ಮೈಸೂರಿಗೆ 250 ಕೋಟಿ ರೂ., ಚಾ.ನಗರಕ್ಕೆ 28 ಕೋಟಿ ರೂ. ನೀಡಲಾಗಿತ್ತು. ನಾನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ಬಳಿಕ ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಇದಕ್ಕೆ ಅಧಿಕಾರಿಗಳು ಮೈಸೂರು ಜಿಲ್ಲೆಯಿಂದ ಸಮರ್ಪಕವಾಗಿ ಸಾಲ ಮರು ಪಾವತಿಯಾಗುತ್ತಿದೆ ಎಂದು ತಿಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದಾಗ ಮೈಸೂರು ಜಿಲ್ಲೆಯಿಂದ ಶೇ.56 ರಷ್ಟು ಸಾಲ ಮಾತ್ರ ಮರು ಪಾವತಿಯಾಗಿದ್ದರೆ, ಚಾ.ನಗರದಿಂದ ಶೇ.96 ರಷ್ಟು ಸಾಲ ಮರು ಪಾವತಿಯಾಗಿತ್ತು. ಇದನ್ನು ಮನಗಂಡು ಚಾ.ನಗರಕ್ಕೆ ಹೆಚ್ಚಿನ ಆದ್ಯತೆ ನೀಡಿ ಎರಡೂವರೆ ವರ್ಷದ ಅವಧಿಯಲ್ಲಿ ಜಿಲ್ಲೆಗೆ 350 ಕೋಟಿ ರೂ. ಸಾಲ ಮಂಜೂರು ಮಾಡಲಾಗಿತ್ತು. ಈ ಮೂಲಕ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಹಾಗೆಯೇ ಪ್ರತಿ ವರ್ಷವು ಉತ್ತಮ ಲಾಭದತ್ತ ಸಾಗುತ್ತಿರುವ ಪಟ್ಟಣದ ಪಿಎಸಿಸಿ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೂ ಅನುದಾನ ನೀಡಲಾಗಿತ್ತು. ಇದೀಗ 1.75 ಕೋಟಿ ರೂ ವೆಚ್ಚದಲ್ಲಿನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ರಾಜಕೀಯ ಸಲ್ಲದು: ಪಟ್ಟಣದ ಪಿಎಸಿಸಿ ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಈವರೆಗೂ ಚುನಾವಣೆ ನಡೆದಿಲ್ಲ. ಪ್ರತಿಯೊಬ್ಬರ ಸಹಕಾರ ಪಡೆದು ಅನ್ಯೋನ್ಯತೆಯಿಂದ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ರೈತರಿಗೆ ಸಾಲ ಸೌಲಭ್ಯ ಹಾಗೂ ಸಂಘದ ಅಭಿವೃದ್ಧಿ ಯಾವುದೇ ಅಡ್ಡಿಯಿಲ್ಲದೇ ಸುಸೂತ್ರವಾಗಿ ನಡೆಯುತ್ತಿತ್ತು. ಆದರೀಗ ಚುನಾವಣೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಇದರಲ್ಲಿ ರಾಜಕೀಯ ಪಿತೂರಿ ನಡೆಯುತ್ತಿದೆ. ಸಹಕಾರ ಸಂಘಗಳಲ್ಲಿ ರೈತರಿಗೆ ಅನುಕೂಲವಾಗುವ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳಾಗಬೇಕೇ ಹೊರತು ರಾಜಕೀಯ ಬೆರೆಸುವುದು ತರವಲ್ಲ. ಇದೀಗ ಇಂತಹ ಕೆಲಸವಾಗುತ್ತಿದೆ ಎಂದು ಬೇಸರ ವ್ಕಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಜಿಪಂ ಮಾಜಿ ಸದಸ್ಯರಾದ ಬಸವರಾಜು, ಕೊಪ್ಪಾಳಿ ಮಹದೇವನಾಯ್ಕ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ, ಜಿಲ್ಲಾ ಉಪಾಧ್ಯಕ್ಷ ಉದ್ದನೂರು ಸಿದ್ದರಾಜು, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಮಾದೇಶ್ ಹಾಗೂ ಇನ್ನಿತರರು ಇದ್ದರು.