

| ನಿತ್ಯಾನಂದ ಶಿವಗಂಗೆ ಶಿವಮೊಗ್ಗ
ಮಲೆನಾಡು ಇದುವರೆಗೆ ಉಗ್ರರ ಸ್ಲೀಪಿಂಗ್ ಸೆಲ್ ಎಂದೇ ಕುಖ್ಯಾತಿ ಪಡೆದಿತ್ತು. ಕುಗ್ರಾಮಗಳಲ್ಲಿರುವ ಒಂಟಿ ಮನೆಗಳಲ್ಲಿ ಉಗ್ರರು ಆಶ್ರಯ ಪಡೆದಿರುವ ಹಲವು ಪ್ರಕರಣಗಳು ಇದಕ್ಕೆ ಪುಷ್ಟಿ ನೀಡಿದ್ದವು. ಆದರೆ ಮಲೆನಾಡು ಈಗ ಉಗ್ರರ ತಯಾರಿಕಾ ಕಾರ್ಖಾನೆಯಾಗಿದೆಯೇ ಎಂಬ ಶಂಕೆ ಬಲವಾಗುತ್ತಿದೆ.
ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿರುವ ಇಬ್ಬರು ಶಂಕಿತ ಉಗ್ರರ ಮೊಬೈಲ್ ಪರಿಶೀಲನೆಗೊಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಮತೀನ್ ಮಲೆನಾಡು ಉಗ್ರ ಸಂಘಟನೆಯ ಮಾಸ್ಟರ್ ಮೈಂಡ್ ಆಗಿದ್ದು, ಈತನ ಆಣತಿಯಂತೆ ಶಾರಿಖ್ ಮಾಜ್ ಹಾಗೂ ಯಾಸಿನ್ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗುತ್ತಿದೆ. ಕಳೆದ 2 ವರ್ಷದಿಂದ ತಲೆಮರೆಸಿಕೊಂಡಿರುವ ಮತೀನ್ ಭೂಗತ ನಾಗಿಯೇ ಉಗ್ರ ಸಂಘಟನೆ ಕಟ್ಟುವ ಕೆಲಸಕ್ಕೆ ಕೈಹಾಕಿರುವುದು ಬೆಳಕಿಗೆ ಬಂದಿದೆ.
ಬೆಳಕಿಗೆ ಬಂದಿದ್ದೇ ರೋಚಕ: ಸ್ವಾತಂತ್ರ ದಿನಾಚರಣೆಯಂದು ಸಾವರ್ಕರ್ ಭಾವಚಿತ್ರ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಗಲಭೆಯಾದ ವೇಳೆ ಗಾಂಧಿಬಜಾರ್ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿತ್ತು. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರು ಪ್ರಮುಖ ಆರೋಪಿ ಜಬಿಯನ್ನು ವಶಕ್ಕೆ ಪಡೆದಿದ್ದರು. ಆರಂಭದಲ್ಲಿ ಉಗ್ರ ಚಟುವಟಿಕೆ ಕುರಿತು ಯಾವಯದೇ ಸುಳಿವು ಸಿಕ್ಕಿರಲಿಲ್ಲವಾದರೂ, ಈತನ ಮನೆಯನ್ನು ಜಾಲಾಡಿದಾಗ ಜಬಿ ಹಾಸಿಗೆ ಕೆಳಗೆ ಒಂದು ಮೊಬೈಲ್ ಫೋನ್ ಸಿಕ್ಕಿತ್ತು. ಈ ಮೊಬೈಲ್ ಮಲೆನಾಡಿನ ಉಗ್ರ ಸಂಘಟನೆಯ ಸಂಪೂರ್ಣ ವಿವರ, ಕೆಲ ನಿಷೇದಿತ ಆಪ್ಗಳ ಮೂಲಕ ಯುವಕರ ಗ್ರೂಪ್ ರಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಪೊಲೀಸರ ಕೈಗೆ ಮೊಬೈಲ್ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ನಿಷೇಧಿತ ಆಪ್ನ ಗ್ರೂಪ್ನಲ್ಲಿದ್ದ ಸದಸ್ಯರೆಲ್ಲರೂ ಲೆಫ್ಟ್ ಆಗಿದ್ದರು. ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಮೊದಲಿಗೆ ಯಾಸಿನ್ನನ್ನು ಬಲೆಗೆ ಬೀಳಿಸಿದ್ದರು. ಅವನು ನೀಡಿದ ಮಾಹಿತಿ ಆಧರಿಸಿ ಮಾಜ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಷೇಧಿತ ಆಪ್ಗಳಲ್ಲಿ ಗ್ರೂಪ್ ಕ್ರಿಯೇಟ್: ಶಾರಿಖ್, ಮಾಜ್ ಹಾಗೂ ಯಾಸಿನ್ ನಿಷೇಧಿತ ಆಪ್ಗಳಲ್ಲಿ ಗ್ರೂಪ್ ರಚನೆ ಮಾಡಿ ಯುವಕರನ್ನು ಸೇರಿಸುತ್ತಿದ್ದರು. ಬಳಿಕ ಆ ಗ್ರೂಪ್ಗಳಲ್ಲಿ ಮತೀಯವಾದದ ಪೋಸ್ಟ್ಗಳನ್ನು ಶೇರ್ ಮಾಡಲಾಗುತ್ತಿತ್ತು. ಯಾರು ಈ ಮೆಸೇಜ್ಗಳಿಗೆ ಪೂರಕವಾಗಿ ಸ್ಪಂದಿಸುತ್ತಾರೋ ಆ ಯುವಕರನ್ನು ಟಾರ್ಗೆಟ್ ಮಾಡಿ ಅವರನ್ನು ಸಂರ್ಪಸತ್ತಿದ್ದರು. ಬಳಿಕ ಅವರಿಗೆ ಬ್ರೖೆನ್ ವಾಶ್ ಮಾಡಿ ಉಗ್ರ ಸಂಘಟನೆಗಳಿಗೆ ಸೇರಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿತ್ತು. ಹೀಗೆ ಉಗ್ರರ ಸಂಪರ್ಕಕ್ಕೆ ಬರುವ ಯುವಕರಿಗೆ ಬಾಂಬ್ ತಯಾರಿಕೆ ತರಬೇತಿಯನ್ನೂ ನೀಡುತ್ತಿದ್ದರು ಎಂದು ಗೊತ್ತಾಗಿದೆ.
ನಿಗದಿತ ಸಮಯದಲ್ಲಿ ಮಾತ್ರ ಆಕ್ಟೀವ್: ನಿಷೇಧಿತ ಆಪ್ಗಳಲ್ಲಿ ಹತ್ತಾರು ಗ್ರೂಪ್ಗಳನ್ನು ರಚಿಸಿಕೊಂಡಿದ್ದ ಆರೋಪಿಗಳು ಒಂದೊಂದು ಗ್ರೂಪಿಗೂ ಒಂದೊಂದು ಸಮಯ ನಿಗದಿಪಡಿಸಿದ್ದರು. ಈ ಗ್ರೂಪ್ಗಳು ನಿಗದಿತ ಸಮಯದಲ್ಲಿ ಮಾತ್ರ ಆಕ್ಟೀವ್ ಆಗಿರುತ್ತಿದ್ದವು. ಒಂದು ವೇಳೆ ನಿಗದಿತ ಸಮಯ ಹೊರತುಪಡಿಸಿ ಬೇರೆ ಸಮಯದಲ್ಲಿ ಗ್ರೂಪ್ ಆಕ್ಟೀವ್ ಆಗಿದ್ದರೆ ಈ ಗ್ರೂಪ್ನಲ್ಲಿರುವ ಸದಸ್ಯರ ಮೊಬೈಲ್ ಬೇರೆಯವರಿಗೆ ಸಿಕ್ಕಿದೆ ಎಂಬುದು ಎಲ್ಲರಿಗೂ ತಿಳಿಯುತ್ತಿತ್ತು. ಹೀಗಾಗಿ ಬೇರೆ ಸಮಯದಲ್ಲಿ ಗ್ರೂಪ್ ಆಕ್ಟೀವ್ ಆದಾಕ್ಷಣ ಗ್ರೂಪ್ನಲ್ಲಿದ್ದ ಎಲ್ಲರೂ ಹೊರಬರುತ್ತಿದ್ದರು. ಜಬಿ ಹಾಸಿಗೆಯ ಕೆಳಗಿದ್ದ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಗ್ರೂಪ್ ನೋಡುತ್ತಿದ್ದಂತೆ ಆ ಗ್ರೂಪ್ನಲ್ಲಿದ್ದ ಎಲ್ಲರೂ ಎಕ್ಸಿಟ್ ಆಗಿದ್ದು ಇದೇ ಕಾರಣಕ್ಕೆ.
ಹೋಗಿದ್ದು ಉನ್ನತ ವ್ಯಾಸಂಗಕ್ಕೆ...: ಮಲೆನಾಡಿನಲ್ಲಿ ಉಗ್ರ ಸಂಘಟನೆ ಕಟ್ಟುತ್ತಿದ್ದ ನಾಲ್ವರಲ್ಲಿ ಮೂವರು ತೀರ್ಥಹಳ್ಳಿ ಮೂಲದವರು. ಇನ್ನೋರ್ವ ಶಿವಮೊಗ್ಗ ಮೂಲದವನು. ಉಗ್ರರೊಂದಿಗೆ ನಂಟು ಹೊಂದಿರುವ ಇವರೆಲ್ಲರೂ ಉನ್ನತ ವ್ಯಾಸಂಗ ಮಾಡಲು ಹೋದವರು ಎಂಬುದು ವಿಶೇಷ. ಮಲೆನಾಡಿನ ಉಗ್ರ ಸಂಘಟನೆಯ ಕಿಂಗ್ಪಿನ್ ಮತೀನ್ ಇಂಜಿನಿಯರಿಂಗ್ ವ್ಯಾಸಂಗಕ್ಕೆಂದು ಬೆಂಗಳೂರಿಗೆ ತೆರಳಿದ್ದ. ಈತನ ತಂದೆ ಭಾರತೀಯ ಸೇನೆಯಲ್ಲಿ 26 ವರ್ಷ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಮತೀನ್ ಇಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ತೊರೆದು ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಮತೀನ್ ಸುಳಿವು ನೀಡಿದವರಿಗೆ ಎನ್ಐಎ ಮೂರು ಲಕ್ಷ ರೂ. ಬಹುಮಾನ ಘೊಷಣೆ ಮಾಡಿದೆ. ಇನ್ನು ಮಾಜ್ ಮಂಗಳೂರಿನಲ್ಲಿ ಎಂಟೆಕ್ ಮಾಡುತ್ತಿದ್ದ. ಆದರೆ ಎಂಟೆಕ್ ಅರ್ಧಕ್ಕೆ ನಿಲ್ಲಿಸಿ ಉಗ್ರರ ಸಂಪರ್ಕಕ್ಕೆ ಬಂದಿದ್ದ. ಶಿವಮೊಗ್ಗ ಸಿದ್ದೇಶ್ವರ ನಗರದ ಯಾಸಿನ್ ಎಲೆಕ್ಟ್ರಾನಿಕ್ಸ್ ಅಂಡ್ ಎಲೆಕ್ಟ್ರಿಕಲ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದನಾದರೂ ಅರ್ಧಕ್ಕೆ ಬಿಟ್ಟು ಮಾಜ್ ನೊಂದಿಗೆ ಕೈಜೋಡಿಸಿದ್ದ. ಶಾರಖ್ ಮಾತ್ರ ಪಿಯುಸಿ ಮುಗಿಸಿ ಬಟ್ಟೆ ಅಂಗಡಿ ನಡೆಸುತ್ತಿದ್ದನಾದರೂ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿದ್ದ.
ಬಾಂಬ್ ತಯಾರಿಕೆಯಲ್ಲಿ ನಿಸ್ಸೀಮರು: ಶಿವಮೊಗ್ಗ ಪೊಲೀಸರಿಗೆ ಸೆರೆ ಸಿಕ್ಕಿರುವ ಇಬ್ಬರು ಶಂಕಿತ ಉಗ್ರರು ಬಾಂಬ್ ತಯಾರಿಕೆಯಲ್ಲಿ ನಿಸ್ಸೀಮರಾಗಿದ್ದವರು. ಸಣ್ಣ ಮಟ್ಟದಲ್ಲಿ ಬಾಂಬ್ಗಳನ್ನು ತಯಾರಿಸುತ್ತಿದ್ದ ಈ ಇಬ್ಬರು, ಪ್ರಾಯೋಗಿಕವಾಗಿ ಅವುಗಳನ್ನು ನಿರ್ಜನ ಪ್ರದೇಶದಲ್ಲಿ ಬ್ಲಾಸ್ಟ್ ಮಾಡುತ್ತಿದ್ದರು. ಆರೋಪಿಗಳ ಮೊಬೈಲ್ನಲ್ಲಿ ಬಾಂಬ್ ತಯಾರಿಕೆ ತಂತ್ರಜ್ಞಾನ ಹಾಗೂ ಪರೀಕ್ಷಾರ್ಥವಾಗಿ ಬಾಂಬ್ ಬ್ಲಾಸ್ಟ್ ಮಾಡಿದ ಮಾಹಿತಿ ಸಿಕ್ಕಿದೆ. ಇದೇ ಆಧಾರದ ಮೇಲೆ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ.